ಮಂಗಳೂರು; ಮಳಲಿ ಪೇಟೆ ಮಸೀದಿ ಸುತ್ತಮುತ್ತ ಸೆ.144 ಜಾರಿ: ಕಮಿಷನರ್ ಶಶಿಕುಮಾರ್
ಸಂಘಪರಿವಾರದ ಸಂಘಟನೆಗಳು ತಾಂಬೂಲ ಪ್ರಶ್ನೆ ಕಾರ್ಯಕ್ರಮ ನಡೆಸಲು ಹೊರಟಿರುವ ಹಿನ್ನೆಲೆ

ಕಮಿಷನರ್ ಶಶಿಕುಮಾರ್
ಮಂಗಳೂರು : ಮಳಲಿ ಪೇಟೆ ಜುಮಾ ಮಸೀದಿಯ ಪುನರ್ ನಿರ್ಮಾಣದ ವೇಳೆ ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ ಮೇ 25ರಂದು ಸಂಘಪರಿವಾರದ ಸಂಘಟನೆಗಳು ತಾಂಬೂಲ ಪ್ರಶ್ನೆ ಕಾರ್ಯಕ್ರಮ ನಡೆಸಲು ಹೊರಟಿರುವ ಹಿನ್ನೆಲೆಯಲ್ಲಿ ಮಳಲಿ ಮಸೀದಿಯ ಸುತ್ತಮುತ್ತ ಸೆ.144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಹಿಂದುತ್ವ ಸಂಘಟನೆಗಳ ನೇತೃತ್ವದಲ್ಲಿ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ತೆಂಕ ಉಳಿಪಾಡಿ ಗ್ರಾಮದ ಜೋಡು ತಡಮೆಯ ಬಳಿಯ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಪೂರ್ವಾಪರ ತಿಳಿದುಕೊಳ್ಳಲು ಮೇ 25ರಂದು ಬೆಳಗ್ಗೆ 8.30ರಿಂದ ತಾಂಬೂಲ ಪ್ರಶ್ನೆ ಕಾರ್ಯಕ್ರಮ ನಡೆಸಲು ಹೊರಟಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಳಲಿ ಪೇಟೆ ಜುಮಾ ಮಸೀದಿಯ ಸುತ್ತಮುತ್ತಲಿನ 500 ಮೀಟರ್ (ಕಾಚಿಲಕೋಡಿಯಿಂದ ಮಳಲಿ ಕಡೆಗೆ ಬರುವ ರಸ್ತೆ, ಗಂಜಿಮಠದಿಂದ ಮಳಲಿ ಮಸೀದಿ ಕಡೆಗೆ ಬರುವ ರಸ್ತೆ ಹಾಗೂ ಕೈಕಂಬ ಕಡೆಯಿಂದ ಜೋಡು ತಡಮೆ ರಸ್ತೆ)ವರೆಗೆ ಮೇ 24ರ ರಾತ್ರಿ 8ರಿಂದ ಮೇ 26ರ ಬೆಳಗ್ಗೆ 8ರವರೆಗೆ ಸೆ.144ರ ಅನ್ವಯ ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.





