ಉಳ್ಳಾಲ: ಖಾಸಗಿ ಶಾಲೆಯ ಶಿಕ್ಷಕಿ ಆತ್ಮಹತ್ಯೆ
ಉಳ್ಳಾಲ, ಆ.12: ಖಾಸಗಿ ಶಾಲೆಯೊಂದರ ಶಿಕ್ಷಕಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಸಮುದಾಯ ಆಸ್ಪತ್ರೆ ಬಳಿ ಶುಕ್ರವಾರ ನಡೆದಿದೆ.
ಉಳ್ಳಾಲ ಪೇಟೆ ನಿವಾಸಿ ಹರಿಣಾಕ್ಷಿ (50) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇವರು ಉಳ್ಳಾಲದ ಲಿಟಲ್ ಹಾರ್ಟ್ಸ್ ಶಾಲೆಯ ಶಿಕ್ಷಕಿಯಾಗಿದ್ದರೆಂದು ತಿಳಿದುಬಂದಿದೆ.
ಹರಿಣಾಕ್ಷಿ ಶುಕ್ರವಾರ ಮುಂಜಾನೆಯಿಂದ ನಾಪತ್ತೆಯಾಗಿರುವ ಬಗೆ ಅವರ ಪುತ್ರ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹುಡುಕಾಟದ ಬಳಿಕ ಮಧ್ಯಾಹ್ನದ ವೇಳೆ ಸಮುದಾಯ ಆರೋಗ್ಯ ಕೇಂದ್ರದ ಬಾವಿಯಲ್ಲಿ ಹರಿಣಾಕ್ಷಿಯವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪುತ್ರನಿಗೆ ಕೋವಿಡ್ ಸೋಂಕು ತಗಲಿದ್ದರಿಂದ ಮಾನಸಿಕವಾಗಿ ನೊಂದಿದ್ದ ಹರಿಣಾಕ್ಷಿ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story