ಜನಸಾಮಾನ್ಯರಿಗೆ ಕ್ಷಿಪ್ರ ನ್ಯಾಯದಾನದಲ್ಲಿ ವಕೀಲರ ಪಾತ್ರ ಮುಖ್ಯ: ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ
ಮಂಗಳೂರು, ಆ.15: ಜನಸಾಮಾನ್ಯರಿಗೆ ಅತೀ ಶೀಘ್ರವಾಗಿ ನ್ಯಾಯ ದೊರಕಿಸಿ ಕೊಡುವಲ್ಲಿ ವಕೀಲರ ಪಾತ್ರ ಮುಖ್ಯವಾಗಿದೆ. ಅದಕ್ಕಾಗಿ ಮಧ್ಯಸ್ಥಿಕೆ ಕೇಂದ್ರ, ಲೋಕ ಅದಾಲತ್ಗಳನ್ನು ಪರಿಣಾಮಕಾರಿಯಾಗಿ ಬಳಸುವಂತೆ ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಕರೆ ನೀಡಿದರು.
ಮಂಗಳೂರು ವಕೀಲರ ಸಂಘ ಮತ್ತು ನ್ಯಾಯಾಂಗ ಇಲಾಖೆಯ ಜಂಟಿ ಆಶ್ರಯದಲ್ಲಿ ಸೋಮವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದಾಗ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ವಕೀಲರನ್ನು ಸೇರಿಸಿ ಅವರ ಸಲಹೆ ಮತ್ತು ಅನುಭವವನ್ನು ಪಡೆದುಕೊಳ್ಳುವುದು ಉತ್ತಮವೆಂದು ವಕೀಲರ ಸಂಘಕ್ಕೆ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಸಲಹೆ ನೀಡಿದರು. ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇತ್ತೀಚೆಗೆ ಜಿಲ್ಲಾ ನ್ಯಾಯಾಧೀಶರಾಗಿ ನಿಯುಕ್ತಿಗೊಂಡ ವಕೀಲರ ಸಂಘದ ಸದಸ್ಯ ಸಿರಾಜುದ್ದೀನ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.