ಆದಾಯ ಮೀರಿ ಆಸ್ತಿ ಹೊಂದಿದ್ದ ಪ್ರಕರಣ; ಮೀನುಗಾರಿಕಾ ನಿರ್ದೇಶನಾಲಯದ ನಿವೃತ್ತ ಜಂಟಿ ನಿರ್ದೇಶಕನಿಗೆ ಶಿಕ್ಷೆ
► 5 ವರ್ಷ ಸಾದಾ ಸಜೆ ಮತ್ತು 1.30 ಕೋ.ರೂ.ದಂಡ ► ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು
ಮಂಗಳೂರು, ಸೆ.6: ಆದಾಯ ಮೀರಿ ಅಧಿಕ ಪ್ರಮಾಣದ ಆಸ್ತಿ ಹೊಂದಿದ್ದ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ಮೀನುಗಾರಿಕಾ ನಿರ್ದೇಶನಾಲಯದ ನಿವೃತ್ತ ಜಂಟಿ ನಿರ್ದೇಶಕ ಗಂಗಾಧರ ವಿ. ಮಡ್ಡಿಕೇರಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಮಂಗಳವಾರ 5 ವರ್ಷಗಳ ಕಾಲ ಸಾದಾ ಸಜೆ ಮತ್ತು 1.30 ಕೋ.ರೂ. ದಂಡ ವಿಧಿಸಿ ಶಿಕ್ಷೆ ವಿಧಿಸಿದೆ.
ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಗಂಗಾಧರ ವಿ. ಮಡ್ಡಿಕೇರಿಯ ವಿರುದ್ಧ ಮಂಗಳೂರಿನ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿ ಆರೋಪಿ ಗಂಗಾಧರ ವಿ. ಮಡ್ಡಿಕೇರಿಯ ಆರೋಪ ಸಾಬೀತಾಗಿದೆ ಎಂದು ಪ್ರಕಟಿಸಿದರು. ಅಲ್ಲದೆ ದಂಡ ಕಟ್ಟಲು ವಿಫಲನಾದರೆ ಹೆಚ್ಚುವರಿ 6ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.
ಪೊಲೀಸ್ ಉಪಾಧೀಕ್ಷಕ ವಿಠಲದಾಸ್ ಪೈ ಆರಂಭಿಕ ಹಂತದಲ್ಲಿ ತನಿಖೆ ನಡೆಸಿದ್ದರು. ಪೊಲೀಸ್ ಉಪಾಧೀಕ್ಷಕ ಉಮೇಶ್ ಜಿ. ಶೇಟ್ ತನಿಖೆ ಮುಂದುವರಿಸಿದ್ದರು. ಹಾಲಿ ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿದ್ದು, ಈ ಹಿಂದೆ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾಗಿದ್ದ ಎಸ್.ವಿಜಯ ಪ್ರಸಾದ್ 2015ರ ಡಿ.4ರಂದು ತನಿಖೆ ಪೂರ್ಣಗೊಳಿಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಕರ್ನಾಟಕ ಲೋಕಾಯುಕ್ತ ಮಂಗಳೂರಿನ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ಸರಕಾರದ ಪರವಾಗಿ ವಾದ ಮಂಡಿಸಿದ್ದಾರೆ.