ಸುರತ್ಕಲ್: ಆಸ್ಪತ್ರೆಯಲ್ಲಿ ಮಹಿಳೆಯರು ಬಟ್ಟೆ ಬದಲಿಸುವ ದೃಶ್ಯ ಚಿತ್ರೀಕರಣ; ಆರೋಪಿ ಪವನ್ ಕುಮಾರ್ ಬಂಧನ
ಸುರತ್ಕಲ್, ಡಿ.7: ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯಕೀಯ ತಪಾಸಣೆಗೆ ತೆರಳಿದ್ದ ಮಹಿಳೆಯರು ಬಟ್ಟೆ ಬದಲಿಸುವಾಗ ಗುಪ್ತ ಕ್ಯಾಮೆರಾ ಮೂಲಕ ವೀಡಿಯೊ ಸೆರೆ ಹಿಡಿಯುತ್ತಿದ್ದ ಓರ್ವನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಅದೇ ಖಾಸಗಿ ಆಸ್ಪತ್ರೆಯಲ್ಲಿ ನರ್ಸಿಂಗ್ ಕೆಲಸ ನಿರ್ವಹಿಸುತ್ತಿದ್ದ ಕಲಬುರಗಿ ಮೂಲದ ಸದ್ಯ ಬಜ್ಪೆಯಲ್ಲಿ ವಾಸವಾಗಿದ್ದ ನರ್ಸಿಂಗ್ ವಿಭಾಗದ ವಿದ್ಯಾರ್ಥಿ ಪವನ್ ಕುಮಾರ್ (21) ಎಂದು ತಿಳಿದು ಬಂದಿದೆ.
ಯುವತಿಯೊಬ್ಬರು ವೈದ್ಯಕೀಯ ತಪಾಸಣೆಗೆ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಆಕೆಗೆ ಸ್ಕ್ಯಾನಿಂಗ್ ಇದ್ದ ಕಾರಣ ಕೋಣೆಯೊಂದರಲ್ಲಿ ಬಟ್ಟೆ ಬದಲಾಯಿಸಲು ಸಿಬ್ಬಂದಿ ತಿಳಿಸಿದ್ದಾರೆ. ಅದರಂತೆ ಯುವತಿ ಬಟ್ಟೆ ಬದಲಾಯಿಸುವ ಮುನ್ನ ಕೋಣೆಯನ್ನು ತಪಾಸಣೆ ನಡೆಸಿದಾಗ ಗುಪ್ತವಾಗಿ ಕ್ಯಾಮೆರಾ ಇರಿಸಿ ಚಿತ್ರೀಕರಿಸುವುದು ಬೆಳಕಿಗೆ ಬಂದಿದೆ.
ಈ ವಿಚಾರವನ್ನು ಯುವತಿ ತಕ್ಷಣ ವೈದ್ಯರ ಗಮನಕ್ಕೆ ತಂದಿದ್ದಾರೆ. ಬಳಿಕ ಎಚ್ಚೆತ್ತುಕೊಂಡ ಆಡಳಿತ ಮಂಡಳಿ ವಿಚಾರಣೆ ನಡೆಸಿದಾಗ ಅದೇ ಆಸ್ಪತ್ರೆಯ ನರ್ಸಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪವನ್ ಕುಮಾರ್ ಎಂಬಾತ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯ ದೂರಿನನ್ವಯ ಆಸ್ಪತ್ರೆಯವರು ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪವನ್ನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದು, ಈತ ಇದೇ ರೀತಿ ಗುಪ್ತ ಕ್ಯಾಮೆರಾ ಅಳವಡಿಸಿ ಹಲವು ಮಹಿಳೆಯರ ವೀಡಿಯೊ ಚಿತ್ರೀಕರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಸುರತ್ಕಲ್ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧಿನ ವಿಧಿಸಿದೆ ಎಂದು ತಿಳಿದು ಬಂದಿದೆ.