ಕೊರೋನ ರೂಪಾಂತರಿ ಹಿನ್ನೆಲೆ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ತಪಾಸಣಾ ಕೇಂದ್ರ ಆರಂಭ

ಮಂಗಳೂರು: ಕೊರೋನ ರೂಪಾಂತರಿ ಒಮಿಕ್ರೋನ್‌ನ ಉಪತಳಿ ‘ಬಿಎಫ್ 7’ ಸೋಂಕಿತ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಪ್ರತ್ಯೇಕ ತಪಾಸಣಾ ಕೇಂದ್ರವನ್ನು ತೆರೆಯಲಾಗಿದೆ.
ವಿಮಾನ ನಿಲ್ದಾಣಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ಎಲ್ಲಾ ಪ್ರಯಾಣಿಕರ ಕೋವಿಡ್ ತಪಾಸಣೆಗೆ ಇದನ್ನು ಸಜ್ಜುಗೊಳಿಸಲಾಗಿದೆ. ಈ ಹಿಂದೆಯೂ ಕೋವಿಡ್ ವೇಳೆ ವಿಮಾನ ನಿಲ್ದಾಣದಲ್ಲಿ ತಪಾಸಣಾ ಕೇಂದ್ರವನ್ನು ತೆರೆಯಲಾಗಿತ್ತು.
ಇಮಿಗ್ರೆಷನ್ ತಪಾಸಣೆಗೂ ಮುನ್ನ ಈ ಕೇಂದ್ರದಲ್ಲಿ ಪ್ರಯಾಣಿಕರ ಸ್ವಾಬ್ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕಾಗಿಯೇ ಪ್ರತ್ಯೇಕ ಸಿಬ್ಬಂದಿ ವರ್ಗವನ್ನು ನಿಯೋಜಿಸಲಾಗಿದೆ. ಸ್ವಾಬ್ ಸ್ಯಾಂಪಲ್ ಪರೀಕ್ಷೆ ಫಲಿತಾಂಶದ ಡಿಜಿಟಲ್ ಪ್ರತಿ ತ್ವರಿತವಾಗಿ ಮತ್ತು ನೇರವಾಗಿ ಆಯಾ ಪ್ರಯಾಣಿಕರ ಕೈಗೆ ಸೇರುವಂತೆ ವ್ಯವಸ್ಥೆ ಮಾಡಲಾಗಿದೆ.
ವಿಮಾನಯಾನ ಸಂಸ್ಥೆಯು ಆಯ್ಕೆ ಮಾಡುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಉಚಿತವಾಗಿಯೇ ತಪಾಸಣೆ ನಡೆಸಲಾಗುತ್ತದೆ. ವಿಮಾನಯಾನಿಗಳಿಗೆ ಸ್ಯಾನಿಟೈಸ್ ಹಾಗೂ ಮಾಸ್ಕ್‌ನ್ನು ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಸರಕಾರದ ಮಾರ್ಗದರ್ಶಿ ಪ್ರಕಾರ ತಪಾಸಣಾ ಕೇಂದ್ರ ಕಾರ್ಯನಿರ್ವಹಿಸುತ್ತದೆ ಎಂದು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.





