ಸುರತ್ಕಲ್: ಡೆಲಿವರಿ ಕಚೇರಿಗೆ ನುಗ್ಗಿದ ಕಳ್ಳರು; ಲಕ್ಷಾಂತರ ರೂ. ಕಳವು
ಸುರತ್ಕಲ್: ಇಲ್ಲಿನ ಡೆಲಿವರಿ ಪ್ರೈವೆಟ್ ಲಿಮಿಟೆಡ್ ನ ಕಚೇರಿಗೆ ಕಳ್ಳರು ನುಗ್ಗಿ ನಗದು ದೋಚಿ ಪರಾರಿಯಾಗಿರುವ ಘಟನೆ ಮುಕ್ಕ ಚೆಕ್ ಪೋಸ್ಟ್ ಬಳಿ ವರದಿಯಾಗಿದೆ.
ಇಲ್ಲಿನ ಚೆಕ್ ಪೋಸ್ಟ್ ಬಳಿಯ ಡೆಲಿವರಿ ಪ್ರೈವೇಟ್ ಲಿಮಿಟೆಡ್ ನ ಕಚೇರಿಯ ಮುಂಭಾಗದಲ್ಲಿದ್ದ ಸಿಸಿಟಿವಿಯನ್ನು ಪುಡಿಗೈದು ಶಟರ್ ನ ಬೀಗ ಮುರಿದು ಒಳಹೊಕ್ಕ ಕಳ್ಳರು 3.25 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ.
ಮೂರು ಕೋಣೆಗಳಲ್ಲಿ ಕಚೇರಿ ಕಾರ್ಯಾಚರಿಸುತ್ತಿದ್ದು, ಕಳ್ಳರು ಎರಡು ಕೋಣೆಗಳ ಬಾಗಿಲು ತೆರೆದಿದ್ದಾರೆ. ಒಳಗಿದ್ದ ಗೋದ್ರೇಜ್ ಕಪಾಟು, ಹಿಂದಿರುಗಿಸಲು ಇಟ್ಟಿದ್ದ ಕೆಲವೊಂದು ಪಾರ್ಸಲ್ ಗಳನ್ನು ಜಾಲಾಡಿದ್ದಾರೆ ಎನ್ನಲಾಗಿದೆ.
ಬ್ಯಾಂಕ್ಗೆ ರಜೆ ಇದ್ದ ಕಾರಣ ಡೋರ್ ಡೆಲಿವರಿಯಿಂದ ಸಂಗ್ರಹಿಸಲಾಗಿದ್ದ ಹಣ ಕಚೆರಿಯಲ್ಲೇ ಇಡಲಾಗಿತ್ತು. ಇದನ್ನು ಕಳ್ಳರು ದೋಚಿದ್ದಾರೆ ಎಂದು ಸಂಸ್ಥೆಯ ಮೂಲಗಳು ಮಾಹಿತಿ ನೀಡಿದೆ.
ಕಳ್ಳರು ಕಚೇರಿಯ ಎದುರಿನ ಸಿಸಿ ಕ್ಯಾಮರಾ ಪುಡಿಗೈದಿದ್ದಾರೆ. ಇನ್ನೊಂದು ಸಿಸಿಕ್ಯಾಮರಾ ಗಮನಿಸಿರಲಿಲ್ಲ. ಹೀಗಾಗಿ ಕಳ್ಳರ ಕೈಚಳಕ ಇನ್ನೊಂದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಕೃತ್ಯದಲ್ಲಿ ಕಚೇರಿಯ ಬಗ್ಗೆ ಮಾಹಿತಿ ಇರುವವರು ಮತ್ತು ಸ್ಥಳೀಯರು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.