ಫೆ.27 ರಿಂದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಉಚಿತ ಶ್ರವಣ ತಪಾಸಣೆ
ಮಂಗಳೂರು: ನಗರದ ಫಾದರ್ ಮುಲ್ಲರ್ ಆಸ್ಪತ್ರೆಯ ವಾಕ್ ಮತ್ತು ಶ್ರವಣ ವಿಭಾಗದ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಮಿಕರಿಗಾಗಿ ಉಚಿತ ಶ್ರವಣ ತಪಾಸಣೆಯನ್ನು ಫೆ.27 ರಿಂದ ಮಾರ್ಚ್ 04ರವರೆಗೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ ಎಂದು ಫಾದರ್ ಮುಲ್ಲರ್ ಆಸ್ಪತ್ರೆಯ ವಾಕ್ ಮತ್ತು ಶ್ರವಣ ವಿಭಾಗದ ಪ್ರಾಂಶುಪಾಲೆ ಎಂಎಸ್ ಸಿಂಥಿಯಾ ಸಂತಮಯೊರ್ ತಿಳಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಒಪಿಡಿ ವಿಭಾಗದ ನಂ.38ರಲ್ಲಿ ಶಿಬಿರ ನಡೆಸಲಾಗುತ್ತಿದೆ. ಪಾಲಿಕೆಯ ಸುಮಾರು 1,000 ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಶ್ರವಣ ದೋಷವುಳ್ಳವರಿಗೆ ಎಡಿಐಪಿ ಸ್ಕೀಮ್ನ ಮೂಲಕ ಶ್ರವಣ ಯಂತ್ರವನ್ನು ಪಡೆಯಲು ಸಹಾಯ ಮಾಡುತ್ತೇವೆ. ಶ್ರವಣ ತಪಾಸಣೆಯೊಂದಿಗೆ ಉಚಿತವಾಗಿ ಕಿವಿ, ಮೂಗು ಮತ್ತು ಗಂಟಲು ತಪಾಸಣೆಯನ್ನು ನಡೆಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಾಕ್ ಮತ್ತು ಶ್ರವಣ ವಿಭಾಗದ ಪ್ರಾಧ್ಯಾಪಕ ದೀಪಕ್ ಎನ್.ರಾವ್ ಉಪಸ್ಥಿತರಿದ್ದರು.