ಮಂಗಳೂರು | ನಂತೂರಿನಲ್ಲಿ ಸ್ಕೂಟರ್ ಗೆ ಟಿಪ್ಪರ್ ಢಿಕ್ಕಿ: ಇಬ್ಬರು ಮೃತ್ಯು

ಮಂಗಳೂರು, ಮಾ.16: ರಾಷ್ಟ್ರೀಯ ಹೆದ್ದಾರಿ 66ರ ನಂತೂರು ಸರ್ಕಲ್ ಬಳಿ ಟಿಪ್ಪರೊಂದು ಸ್ಕೂಟರ್ಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತ(Accident)ದಲ್ಲಿ ಬಾಲಕಿ ಸಹಿತ ಇಬ್ಬರು ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ 12:15ರ ವೇಳೆ ಸಂಭವಿಸಿರುವುದು ವರದಿಯಾಗಿದೆ.
ಸುಲ್ತಾನ್ ಬತ್ತೇರಿ ನಿವಾಸಿ ಸ್ಯಾಮುಯೆಲ್ ಜೇಸುದಾಸ್ (66) ಹಾಗೂ ಅವರ ಸೊಸೆಯ ದೊಡ್ಡಮ್ಮನ ಮಗಳು, ತೊಕ್ಕೊಟ್ಟು ನಿವಾಸಿ ಭೂಮಿಕಾ(17) ಮೃತಪಟ್ಟವರೆಂದು ಪೊಲೀಸರು ತಿಳಿಸಿದ್ದಾರೆ.
ಸ್ಯಾಮುಯೆಲ್ ಜೇಸುದಾಸ್ ಅವರು ಭೂಮಿಕಾರನ್ನು ತೊಕ್ಕೊಟ್ಟಿನಿಂದ ಸ್ಕೂಟರ್ನಲ್ಲಿ ಕೂರಿಸಿಕೊಂಡು ಸುಲ್ತಾನ್ ಬತ್ತೇರಿಯತ್ತ ತೆರಳುತ್ತಿದ್ದ ವೇಳೆ ನಂತೂರು ಸರ್ಕಲ್ ಬಳಿ ಈ ಅಪಘಾತ ಸಂಭವಿಸಿದೆ.
ಪಂಪ್ವೆಲ್ ಕಡೆಯಿಂದ ಬಂದ ಟಿಪ್ಪರ್ ಸಿಗ್ನಲ್ ಬಳಿ ನಿಂತಿದ್ದ ಸ್ಕೂಟರ್ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರ ಪರಿಣಾಮವಾಗಿ ರಸ್ತೆಗೆ ಬಿದ್ದ ಇಬ್ಬರು ಸವಾರರು ಟಿಪ್ಪರಿನಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಈ ಘಟನೆ ನಡೆದ ಬೆನ್ನಲ್ಲೇ ಸ್ಥಳದಲ್ಲಿದ್ದ ಸ್ಥಳೀಯರು ಟಿಪ್ಪರ್ ಚಾಲಕನನ್ನು ಲಾರಿಯಿಂದ ಎಳೆದುಹಾಕಿ ಹಲ್ಲೆ ನಡೆಸಿದ್ದಾರೆ. ಟಿಪ್ಪರ್ಗೆ ಕಲ್ಲೆಸೆದು ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ. ಅತಿ ವೇಗ ಮತ್ತು ಅಜಾಗರೂಕತೆಯಿಂದ ಟ್ರಕ್ ಚಲಾಯಿಸಿ ಇಬ್ಬರ ಸಾವಿಗೆ ಕಾರಣವಾದ ಆರೋಪದಲ್ಲಿ ಟಿಪ್ಪರ್ ಚಾಲಕ ಸತೀಶ್ ಗೌಡ ಪಾಟೀಲ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಟ್ರಾಫಿಕ್ ಈಸ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







