ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಐದು ಮಂದಿಯನ್ನು ಉಚ್ಚಾಟಿಸಲಾಗಿದೆ: ಮುಲ್ಕಿ ಬ್ಲಾಕ್ ಕಾಂಗ್ರೆಸ್

ಮುಲ್ಕಿ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಆರೋಪದಲ್ಲಿ ಐದು ಮಂದಿ ಮುಲ್ಕಿ ಬ್ಲಾಕ್‌ನ ಕಾಂಗ್ರೆಸ್ ಮುಖಂಡರನ್ನು ಉಚ್ಚಾಟಿಸಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಆದೇಶಿಸಿದ್ದಾರೆ.
ಧನಂಜಯ ಮಟ್ಟು ಅತಿಕಾರಿಬೆಟ್ಟು, ಧನ್ ರಾಜ್ ಕೋಟ್ಯಾನ್ ಸಸಿಹಿತ್ಲು, ರವಿ ಪೂಜಾರಿ ಸೂರಿಂಜಿ, ರಮೇಶ್ ಪೂಜಾರಿ ಚೆಳಾಯರು, ದಯಾನಂದ ಮಟ್ಟು ಅತಿಕಾರಿಬೆಟ್ಟು ಮೊದಲಾದವರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತನದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಮಿಥುನ್ ರೈ ವಿರುದ್ಧ ಪ್ರಚಾರ ಮಾಡಿ, ಬಿಜೆಪಿ ಪರ ಕೆಲಸ ನಿರ್ವಹಿಸಿದ ಪಕ್ಷ ವಿರೋಧಿ ಚಟುವಟಿಕೆಗಳನ್ನು ಗಮನಿಸಲಾಗಿದೆ. ಈ ಕಾರಣಕ್ಕಾಗಿ ತಮ್ಮನ್ನು ಈ ಕೂಡಲೇ ಜಾರಿಗೆ ಬರುವಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತನದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





