ಮಂಗಳೂರು: 4ನೇ ನಿಟ್ಟೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ

ಮಂಗಳೂರು: ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿರುವ ನಾಲ್ಕನೇ ನಿಟ್ಟೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಭಾರತೀಯ ಚಲನಚಿತ್ರ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷ ಪ್ರೇಮೇಂದ್ರ ಮಜೂಮ್‌ದಾರ್ ಅವರು ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಚಲನಚಿತ್ರೋತ್ಸವಗಳು ಜನಮಾನಸದ ನಡುವೆ ನಡೆಯಬೇಕು. ನಿಟ್ಟೆ ವಿಶ್ವವಿದ್ಯಾನಿಲಯವು ಈ ನಿಟ್ಟಿನಲ್ಲಿ ಉತ್ತಮ ಪ್ರಯೋಗವನ್ನು ಮಾಡಿದೆ. ಕಾಲೇಜಿನಿಂದ ಹೊರಬಂದು ಜನರ ನಡುವೆ ಉತ್ಸವವನ್ನು ನಡೆಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಚಲನಚಿತ್ರೋತ್ಸವದ ಕಾರ್ಯಕ್ರಮ ಪಟ್ಟಿಯನ್ನು ಉತ್ತಮವಾಗಿ ರೂಪಿಸಲಾಗಿದೆ. ಸಮಾಜಮುಖಿಯಾದ ಚಲನಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಸಹ ಕುಲಪತಿ ಪ್ರೊ.ಡಾ.ಶಾಂತಾರಾಂ ಶೆಟ್ಟಿ, ಚಲನಚಿತ್ರಗಳು ಸಮಾಜವನ್ನು ಬೆಸೆಯುವಂತಿರಬೇಕೇ ಹೊರತು, ಒಡೆಯುವಂತೆ ಇರಬಾರದು. ಶಾಂತಿ ಆಧಾರಿತ ಚಿತ್ರಗಳನ್ನು ತಯಾರಿಸಬೇಕೇ ಹೊರತು ದ್ವೇಷ ಮತ್ತು ಹಿಂಸೆಯನ್ನು ಉತ್ತೇಜಿಸುವಂತೆ ಇರಬಾರದು. ಅದರಲ್ಲೂ ಯುವಜನರನ್ನು ಸಮಾಜಮುಖಿಗಳಾಗುವಂತೆ ನೋಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಉತ್ಸವದಲ್ಲಿ ಒಟ್ಟು 100 ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಕನ್ನಡ, ಹಿಂದಿ, ಬಂಗಾಳಿ, ನೇಪಾಳಿ, ಫ್ರೆಂಚ್ ಸೇರಿದಂತೆ ಹಲವು ಭಾಷೆಗಳ ಚಲನಚಿತ್ರಗಳು ಪ್ರದರ್ಶಿತಗೊಳ್ಳುತ್ತಿವೆ.
ಛಾಯಾಚಿತ್ರ ಪ್ರದರ್ಶನ
ಹಿರಿಯ ಛಾಯಾಗ್ರಾಹಕ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದಿರುವ ಚಲನಚಿತ್ರರಂಗದ ಸುಮಾರು 185 ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಗಮನ ಸೆಳೆಯಿತು. ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಶಂಕರನಾಗ್, ಶ್ರೀನಾಥ್, ಕಲ್ಪನಾ, ಆರತಿ, ಭಾರತಿ, ಜಯಂತಿ ಇತ್ಯಾದಿ ನಟ–ನಟಿಯರ ವಿವಿಧ ಸನ್ನಿವೇಶಗಳ, ಕಾಲಮಾನದ ಅಪರೂಪದ ಛಾಯಾಚಿತ್ರಗಳು ಗಮನಸೆಳೆದವು.
ನಿಟ್ಟೆ ವಿವಿ ಒಡಂಬಡಿಕೆ
ನಿಟ್ಟೆ ವಿಶ್ವವಿದ್ಯಾನಿಲಯ ಹಾಗೂ ಭಾರತೀಯ ಚಲನಚಿತ್ರ ಸಮಾಜಗಳ ಒಕ್ಕೂಟದ ನಡುವೆ ಶೀಘ್ರವೇ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಸಹ ಕುಲಪತಿ ಪ್ರೊ.ಡಾ.ಶಾಂತಾರಾಂ ಶೆಟ್ಟಿ ಪ್ರಕಟಿಸಿದರು. ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಸಹಭಾಗಿತ್ವದಲ್ಲಿ ಆಗುವ ಈ ಒಡಂಬಡಿಕೆಯು ಸಿನೆಮಾ ನಿರ್ಮಾಣ ಸಂಬಂಧಿಸಿದ ವಿವಿಧ ಕ್ಷೇತ್ರಗಳಿಗೆ ಗಮನ ನೀಡಲಿದೆ ಎಂದು ತಿಳಿಸಿದರು.






.jpeg)








