-

ಗ್ರಾಮೀಣ ಮಹಿಳಾ ಶಿಕ್ಷಣದಲ್ಲಿ ಗಮನಾರ್ಹ ಸಾಧನೆ ಮಾಡಿ ಮಾದರಿಯಾದ ಮೆಲ್ಕಾರ್ ಮಹಿಳಾ ಕಾಲೇಜು

-

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಹೆಣ್ಣು ಸಮಾಜದ ಕಣ್ಣು ಎಂಬೆಲ್ಲಾ ನಾಣ್ಣುಡಿಗಳು, ಸ್ವಾಸ್ಥ ಸಮಾಜದ ಹೆಣ್ಣಿಗಿರುವ ಧನಾತ್ಮಕವಾದ ಮಾತುಗಳು. ಒಂದು ಧನಾತ್ಮಕವಾದ ಸಮಾಜವನ್ನು ನಿರ್ಮಿಸಲು ಹೆಣ್ಣಿಗೆ ವಿದ್ಯಾಭ್ಯಾಸ ನೀಡುವುದು ಅಗತ್ಯ ಆಗಿರುತ್ತದೆ. ಮಹಿಳೆಗೆ ಸ್ವತಂತ್ರವಾಗಿ ವಿದ್ಯಾಭ್ಯಾಸ ಪಡೆಯುವಂತಹ ವಿದ್ಯಾಕೇಂದ್ರದ ಅಗತ್ಯತೆಯನ್ನು ಮನಗೊಂಡು ಮೆಲ್ಕಾರ್ ಎಂಬಲ್ಲಿ ಗ್ರಾಮೀಣ ಹಿಂದುಳಿದ ಪ್ರದೇಶಗಳ ಹೆಣ್ಣು ಮಕ್ಕಳಿಗೆ ಅನುಕೂಲವಾಗುವಂತೆ, ಮಹಿಳಾ ಪದವಿಪೂರ್ವ ಕಾಲೇಜು 2009 ರಲ್ಲಿ ಸ್ಥಾಪನೆಗೊಂಡಿತು.

ಒಬ್ಬ ಮನುಷ್ಯನನ್ನು ಪರಿಪೂರ್ಣ  ನಾಗರಿಕನನ್ನಾಗಿ ಪರಿವರ್ತಿಸುವಲ್ಲಿ ಶಿಕ್ಷಣವು ಮಹತ್ವದ ಪಾತ್ರವಹಿಸುತ್ತದೆ. ಶಿಕ್ಷಣದ ಮಹತ್ವವನ್ನು ಅರಿತು ನಮ್ಮ ನಾಡಿನ ಜನತೆಗೆ ಒಳಿತಾಗಬೇಕು, ಸಜೀಪದಂತಹ ಗ್ರಾಮೀಣ ಹಿಂದುಳಿದ ಪ್ರದೇಶದಲ್ಲಿ ಉತ್ತಮ ಪ್ರತಿಭೆಗಳ ಅನಾವರಣವಾಗಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಬಂಟ್ವಾಳದ ಸಜೀಪ ಮೂಲದ ದೂರದರ್ಶಿತ್ವ ಉದ್ಯಮಿ, ಸಮಾಜಸೇವಕ, ಎಸ್.ಎಂ ರಶೀದ್ ಹಾಜಿ ಮತ್ತು ಟ್ರಸ್ಟಿಗಳ ಮುಂದಾಳತ್ವದಲ್ಲಿ ಪ್ರಾರಂಭಗೊಂಡ ಸಂಸ್ಥೆಯು ಪಾಣೆಮಂಗಳೂರು ಆಲಡ್ಕ ಮಸೀದಿಯ ಕಟ್ಟಡದಲ್ಲಿ 2009ನೇ ಮೊದಲ ಶೈಕ್ಷಣಿಕ ವರ್ಷದಲ್ಲಿ 50 ವಿದ್ಯಾರ್ಥಿನಿಯರನ್ನು ಒಳಗೊಂಡ ಪ್ರಥಮ ಪಿ.ಯು.ಸಿ ಕಲಾ ಹಾಗೂ ವಾಣಿಜ್ಯ ವಿಭಾಗದ ತರಗತಿಗಳನ್ನು ಆರಂಭಿಸಲಾಯಿತು. ಜನಾಬ್ ಬಿ.ಕೆ ಅಬ್ದುಲ್ ಲತೀಫ್ ಪ್ರಾಂಶುಪಾಲರಾಗಿ, ಶ್ರೀಮತಿ ಸವರಿನಾ, ಶ್ರೀಮತಿ ಸಫ್‌ನಾಝ್, ಶ್ರೀಮತಿ ನೌರೀನಾ, ಕುಮಾರಿ ಪ್ರಮೀತಾ ಪಾಯಸ್, ಶ್ರೀಮತಿ ಶಹನಾರ್ ಪುರ್ಖಾನಿ ಹಾಗೂ ಜನಾಬ್ ಅಬ್ದುಲ್ ಮಜೀದ್ ಎಸ್ ಉಪನ್ಯಾಸಕರಾಗಿ ನಿಯುಕ್ತಿಗೊಂಡರು.

 2010ನೇ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ಪ್ರದೇಶದಲ್ಲಿ ವಿಶಾಲವಾದ ಕ್ರೀಡಾಂಗಣವನ್ನೊಳಗೊಂಡ ಸುಮಾರು 3 ಎಕ್ರೆ ಜಾಗದಲ್ಲಿರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. 2010ನೇ ಶೈಕ್ಷಣಿಕ ವರ್ಷದಿಂದಲೇ ವಾಣಿಜ್ಯ ವಿಭಾಗದಲ್ಲಿ ಶೇ 100, ಕಲಾ ಮತ್ತು ವಿಜ್ಞಾನ ವಿಭಾಗದಲ್ಲಿ ಸರಾಸರಿ ಶೇ 97 ಫಲಿತಾಂಶ ಸಾಧಿಸಿಕೊಂಡು ಬರುತ್ತಿರುವ ಸಂಸ್ಥೆ, ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿನಿಯರ ದಾಖಲಾತಿ ಹೆಚ್ಚಿಸಿಕೊಂಡು ಬಂದಿದ್ದು, ಇಂದು ಪಿ.ಯು.ಸಿ, ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ 360 ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅದಲ್ಲದೇ ಪೋಷಕರ ಮತ್ತು ವಿದ್ಯಾರ್ಥಿನಿಯವರ ಬೇಡಿಕೆಯಂತೆ 2012ನೇ ಶೈಕ್ಷಣಿಕ ವರ್ಷದಿಂದ ಪದವಿ ತರಗತಿಗಳಾದ ಬಿ.ಎ ಹಾಗೂ ಬಿ.ಕಾಂ ವಿಭಾಗಗಳನ್ನು ಪ್ರಾರಂಭಿಸಿ, ಬಿ.ಎ ಪದವಿಯ ಪ್ರಥಮ ಬ್ಯಾಚ್ ಶೇ 100 ಫಲಿತಾಂಶ ದಾಖಲಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಪ್ರಸ್ತುತ ಪದವಿ ವಿಭಾಗದಲ್ಲಿ 300 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ.

 ವಿದ್ಯಾರ್ಥಿನಿಯರು ಪ್ರತಿವರ್ಷ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗುವುದರ ಜೊತೆಗೆ ದಾರ್ಶನಿಕತೆ, ಕಾಯಕ ನಿಷ್ಠೆ, ವೃತ್ತಿಪರತೆ, ಜೀವನ ಮೌಲ್ಯಗಳ ಅಳವಡಿಕೆ, ಸ್ವಯಂ ಶಿಸ್ತು, ಸರ್ವತೋಮುಖ ಚಿಂತನೆ, ಬೆಳವಣಿಗೆಯ ಸಮಗ್ರ ಕಲ್ಪನೆಯ ಸಾಕಾರ ಹಾಗೂ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವುದರೊಂದಿಗೆ ತಾಲೂಕು, ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಹತ್ತು ಹಲವು ಪುರಸ್ಕಾರಗಳನ್ನು ಪಡೆದಿರುವುದು ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಸಾಕ್ಷಿ. ಈ ವಿದ್ಯಾರ್ಥಿಗಳ ಸಾಧನೆಗೆ ಉಪನ್ಯಾಸಕರ ಮಾರ್ಗದರ್ಶನ ಮುಖ್ಯವಾಗಿದೆ.

ವಿದ್ಯಾರ್ಥಿಗಳಲ್ಲಿ ನಾಯಕತ್ವದ ಜಾಗೃತಿಯನ್ನು ಮೂಡಿಸುವಲ್ಲಿ ಕಾಲೇಜಿನ ಸ್ಟೂಡೆಂಟ್ ಕೌನ್ಸಿಲ್ ಮುಖ್ಯ ಪಾತ್ರ ವಹಿಸಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪ್ರತಿ ವರ್ಷ ವಿದ್ಯಾರ್ಥಿ ಸಂಸತ್ತು, ರಾಷ್ಟ್ರೀಯ ಹಬ್ಬಗಳ ಆಚರಣೆ, ಭಾಷಣ ಸ್ಪರ್ಧೆ, ಚರ್ಚಾಕೂಟ, ರಸಪ್ರಶ್ನೆ, ಸಂಗೀತ ಸ್ಪರ್ಧೆ, ಸೈನ್ಸ್ ಮಾಡೆಲ್ ರಚನೆ, ಪ್ರಾಚೀನ ವಸ್ತುಗಳ ಪ್ರದರ್ಶನ, ಆಹಾರ ಮೇಳ ಹಾಗೂ ಇನ್ನಿತರ ಚಟುವಟಿಕೆಗಳನ್ನು ಏರ್ಪಡಿಸಲಾಗುತ್ತಿದೆ. ವಿದ್ಯಾರ್ಥಿ ಕೌನ್ಸಿಲ್ ಜೊತೆಗೆ ಮಹಿಳಾ ದೌರ್ಜನ್ಯ ವಿರೋಧಿ ಸಂಘ, ಸ್ಟೂಡೆಂಟ್ ವೆಲ್‌ಫೇರ್ ಸಂಸ್ಥೆ, ಪ್ರಣತಿ ಭಿತ್ತಿಪತ್ರಿಕೆ, ಇವೆಲ್ಲವು  ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ. ಸರಕಾರ ಸರ್ಕಾರೇತರ ಸಂಘ ಸಂಸ್ಥೆಗಳಿಂದ ಲಭ್ಯವಿರುವ ಸಾಕಷ್ಟು ವಿದ್ಯಾರ್ಥಿವೇತನ ವಿದ್ಯಾರ್ಥಿನಿಯವರಿಗೆ ಪ್ರೋತ್ಸಾಹಕವಾಗಿದೆ.

“ಸುಜ್ಞಾನಿಯಾದ ಉಪನ್ಯಾಸಕರು ಮಾತ್ರ ವಿದ್ಯಾರ್ಥಿಗಳಲ್ಲಿ ಜ್ಞಾನದ ಕಿಡಿಯನ್ನು ಪ್ರಜ್ವಲಿಸಬಲ್ಲ, ಒಳಿತಿಗೆ ಆಹ್ವಾನಿಸುವ, ಒಳಿತನ್ನು ನಿರ್ದೇಶಿಸುವ, ಕೆಡುಕನ್ನು ವಿರೋಧಿಸುವ ಒಂದು ವಿಭಾಗ ನಿಮ್ಮಲ್ಲಿರಲಿ. ಅವರೇ ಜಯಶಾಲಿಗಳು” ಎಂದು ಪವಿತ್ರ ಕುರ್‌ಆನ್ ಸಾರುತ್ತದೆ. ಆ ನಿಟ್ಟಿನಲ್ಲಿ ಅತ್ಯಂತ ಹಿರಿಯ ನುರಿತ ಉಪನ್ಯಾಸಕ ವೃಂದದ ಜೊತೆಗೆ ಸದಾ ಸೇವಾ ಮನೋಭಾವವಿರುವ ಮಹಿಳಾ ಉಪನ್ಯಾಸಕರು ವಿದ್ಯಾರ್ಥಿಗಳಲ್ಲಿ ಆತ್ಮಸೈರ್ಯ ತುಂಬುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಪ್ರಾಂಶುಪಾಲರಾದ ಬಿ.ಕೆ.ಅಬ್ದುಲ್ ಲತೀಫ್ ಇವರಿಗೆ ಬೆಂಗಳೂರಿನ ಗಾರ್ಡನ್ ಸಿಟಿ ಕಾಲೇಜು ಅತ್ಯುತ್ತಮ ಶೈಕ್ಷಣಿಕ ಮತ್ತು ಆಡಳಿತ ನಿರ್ವಹಣೆ ಪ್ರಶಸ್ತಿ ನೀಡಿ ಗೌರವಿಸಿದರೆ, ಇತಿಹಾಸ ಉಪನ್ಯಾಸಕರಾದ ಅಬ್ದುಲ್ ಮಜೀದ್ ಎಸ್. ಇವರಿಗೆ ದಕ್ಷಿಣಕನ್ನಡ ಜಿಲ್ಲಾ ಚುಟುಕ ಸಾಹಿತ್ಯ ಪರಿಷತ್, ಉತ್ತಮ ಸಂಘಟಕಪ್ರಶಸ್ತಿ ನೀಡಿ ಗೌರವಿಸಿದೆ.

ಕೆಲವು ಉಪನ್ಯಾಸಕರು ಸಂಪನ್ಮೂಲ ವ್ಯಕ್ತಿಗಳಾಗಿ ಬೇರೆಬೇರೆ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರ. ಪದವಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶಕ್ಕಾಗಿ ಯೆನಪೋಯ ವಿಶ್ವವಿದ್ಯಾನಿಲಯದ ಗೌರವಕ್ಕೆ ಭಾಜನವಾಗಿದೆ.

ಧಾರ್ಮಿಕ ವಿದ್ಯಾಭ್ಯಾಸ

ಲೌಕಿಕ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣವು ಸೇರಿದಾಗ ಮಾತ್ರ ಆ ಶಿಕ್ಷಣವು ಪೂರ್ಣವಾಗುವುದು. ದೇವರ ಭಯವೇ ಜ್ಞಾನದ ಆರಂಭ ಎಂಬ ಮಾತಿನಂತೆ ಧರ್ಮ, ದೇವರು ಎಂಬ ತತ್ವಗಳ ನಂಬಿಕೆಯೊಂದಿಗೆ ಧಾರ್ಮಿಕ ಶಿಕ್ಷಣದೊಂದಿಗೆ ಲೌಕಿಕ ಶಿಕ್ಷಣವನ್ನು ಪಡೆಯುದು ಅಗತ್ಯ.

ಆದರೆ ಮದರಸದಲ್ಲಿ ಮಹಿಳೆಯರೇ ಕಲಿಯುವಂತಹ, ಕಲಿಸುವಂತಹ ವ್ಯವಸ್ಥೆಯು ಇಲ್ಲದಿರುದರಿಂದ ಹೆಣ್ಣು ಮಕ್ಕಳ ಶಿಕ್ಷಣವನ್ನು ಹೆತ್ತವರು ಅರ್ಧಕ್ಕೆ ನಿಲ್ಲಿಸಿ ಬಿಡುತ್ತಾರೆ. ಇಂತಹ ಹಲವಾರು ಸಮಸ್ಯೆಗಳನ್ನು ಮನಗಂಡು ಸಮುದಾಯದ ಚಿಂತಕರೂ ಆದಂತಹ ಜನಾಬ್ ಎಸ್.ಎಂ.ರಶೀದ್ ಹಾಜಿಯವರು ಕಾಲೇಜಿನ ಆರಂಭದ ವರ್ಷದಲ್ಲಿಯೇ ಲೌಕಿಕ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣವನ್ನು ಆರಂಭಿಸಿದರು. ಇಲ್ಲಿ ಫಿಕ್ಹ್, ತಫ್‌ಸೀರ್, ತಜ್‌ವೀದ್, ಸೀರತುನ್ನಬಿಯಂತಹ ಪಠ್ಯಗಳನ್ನು ಅಳವಡಿಸುವುದರೊಂದಿಗೆ ಅರಬೀ ಭಾಷಾ ಕಲಿಕೆಗೆ ಆದ್ಯತೆಯನ್ನು ನೀಡಲಾಗುತ್ತಿದೆ. ಇದರೊಂದಿಗೆ ಕುರ್‌ಆನ್‌ನ ಕೆಲವು ಸೂರ:ಗಳನ್ನು ಕಂಠಪಾಠ (ಹಿಫ್‌ಳ್) ಮಾಡಿಸಲಾಗುತ್ತಿದೆ. ಅಲ್ಲದೆ ಧಾರ್ಮಿಕ ಶಿಕ್ಷಣದಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ, ಅವರಿಗೆ ಪ್ರತ್ಯೇಕ ಸಮಯಗಳಲ್ಲಿ ಈ ಬಗ್ಗೆ ತರಬೇತು ನೀಡಲಾಗುತ್ತಿದೆ.

ಪ್ರಸಕ್ತ ಸಾಲಿನಲ್ಲಿ ಇಬ್ಬರು ಇಸ್ಲಾಮಿಕ್ ಉಪನ್ಯಾಸಕಿಯರಿದ್ದು ತರಗತಿಗಳು, ಪರೀಕ್ಷೆಗಳು, ಅಚ್ಚುಕಟ್ಟಾಗಿ ನಡೆಯುತ್ತಿದೆ. ಇಲ್ಲಿ ಪದವಿ ಮುಗಿಸಿ ಹೋದವರಲ್ಲಿ ಆಸಕ್ತ ವಿದ್ಯಾರ್ಥಿನಿಗಳಿಗಾಗಿ ವಾರಕ್ಕೊಂದು ಇಸ್ಲಾಮೀ ಕ್ಲಾಸ್‌ಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಮುಂದೆ ಆಲೀಮ್ ಕೋರ್ಸ್ ಪ್ರಾರಂಭಿಸುವ ಯೋಜನೆಯನ್ನು ಹಾಕಿಕೊಂಡಿದೆ.

 ಒಟ್ಟಿನಲ್ಲಿ ಮೌಲ್ಯಯುತ ಶಿಕ್ಷಣವನ್ನು, ಸಂಸ್ಕಾರಯುತ ಭಾವೀ ಜನಾಂಗವನ್ನು ಗುರಿಯಾಗಿರಿಸಿದ ಈ ಶಿಕ್ಷಣ ಸಂಸ್ಥೆಗೆ ಇಸ್ಲಾಮಿಕ್ ಶಿಕ್ಷಣದ ಅಳವಡಿಸುವಿಕೆಯು ಉತ್ತಮ ಪ್ರಭಾವವನ್ನುಂಟು ಮಾಡಿದೆ.

ಸಂಸ್ಥೆಗೆ ಹಲವಾರು ಶಿಕ್ಷಣ ತಜ್ಞರು, ಧಾರ್ಮಿಕ ಪಂಡಿತರು, ರಾಜಕೀಯ ನೇತಾರರು,ಶಿಕ್ಷಣ ಇಲಾಖೆಯ ಮುಖ್ಯಸ್ತರು,ಸಮುದಾಯದ ನಾಯಕರನೇತರು ಮಾರ್ಗದರ್ಶನ ಮಾಡುತ್ತಿರುತ್ತಾರೆ.

ವಿದ್ಯಾರ್ಥಿನಿಯರ ಸಾಧನೆ :

* ಪ್ರತಿ ವರ್ಷವೂ ತಾಲೂಕು, ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿನಿಯವರು ಭಾಗವಹಿಸುತ್ತಿದ್ದು, ವಿವಿಧ ಪ್ರಶಸ್ತಿ ಬಹುಮಾನಗಳನ್ನು ಪಡೆದಿರುತ್ತಾರೆ.

* 2012-13ನೇ ಸಾಲಿನಲ್ಲಿ ಬೆಂಗಳೂರಿನ ಪ್ರತಿಷ್ಠಿತ ಜ್ಞಾನಜ್ಯೋತಿ ಸಂಸ್ಥೆ ನೀಡುವ ಪ್ರತಿಭಾ ಪುರಸ್ಕಾರಕ್ಕೆ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಶಾಂತಿ ಮರೀನಾ ವೇಗಸ್ ಪಾತ್ರಳಾಗಿದ್ದಾಳೆ.

*  ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ದಿ ನಿಧಿ, ದ.ಕ ಜಿಲ್ಲೆ ಇವರು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಶಾಲಿಮಾ ಕೆ.ಪಿ ಪ್ರಥಮ, ಚರ್ಚಾ ಸ್ಪರ್ಧೆ ಮತ್ತು ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಫಲೀಲ ಸಿಮಿತ್ ದ್ವಿತೀಯ ಬಹುಮಾನ ಪಡೆದಿರುತ್ತಾರೆ.

* ಎಸ್.ವಿ.ಎಸ್ ಕಾಲೇಜು ಬಂಟ್ವಾಳದಲ್ಲಿ ನಡೆದ ಜಿಲ್ಲಾ ಮಟ್ಟದ ವಿಕಾಸ 2015 ಮತ್ತು ವಿಕಾಸ 2016 ಸ್ಪರ್ಧೆಯಲ್ಲಿ ಫಲೀಲ ಸಿಮಿತ್ ಇಂಗ್ಲೀಷ್ ಭಾಷಣದಲ್ಲಿ ದ್ವಿತೀಯ, ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಪಡೆದಿರುತ್ತಾರೆ.

*  ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ಮಂಗಳೂರು ಇವರು ದಶಮಾನೋತ್ಸವ ಪ್ರಯುಕ್ತ ಆಯೋಜಿಸಿದ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಫಲೀಲ ಸಿಮಿತ್ ಪ್ರಥಮ, ಆಶುರಾ ದ್ವಿತೀಯ ಬಹುಮಾನ ಪಡೆದಿರುತ್ತಾರೆ.

ಕಾಲೇಜಿನ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿನಿಯರು ಅಪ್ರತಿಮ ಸಾಧನೆಗೈಯುತ್ತಿದ್ದಾರೆ.

ಸಂಸ್ಥೆಯ ಮುಂದಿನ ಯೋಜನೆಗಳು

ಪಿ.ಯು.ಸಿ. ಯಿಂದ ಸ್ನಾತಕೋತ್ತರ ಪದವಿವರೆಗೆ ಒಂದೇ ಕ್ಯಾಂಪಸ್ಸಿನಲ್ಲಿ ವಿದ್ಯಾಬ್ಯಾಸ ನೀಡುವುದು.
ಮಹಿಳಾ ಬಿ.ಎಡ್ ಪದವಿಯನ್ನು ಆರಂಭಿಸುವುದು.
ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯವನ್ನು ಒದಗಿಸುವುದು.
ಮುಸ್ಲಿಂ ವಿದ್ಯಾರ್ಥಿನಿಯರಿಗೆ ಧಾರ್ಮಿಕ ಪದವಿ ವಿದ್ಯಾಭ್ಯಾಸಕ್ಕಾಗಿ ಆಲಿಮಾ ಕೋರ್ಸ್ ಆರಂಭಿಸುವುದು.

ಮಹಿಳಾ ಶಿಕ್ಷಣದ ಮೂಲಕ ಮೌಲ್ಯಯುತ ಸಮಾಜ ನಿರ್ಮಾಣ ನಮ್ಮ ಉದ್ದೇಶ : ಸಂದರ್ಶನದಲ್ಲಿ ಹಾಜಿ ಎಸ್.ಎಂ.ರಶೀದ್,ಅಧ್ಯಕ್ಷರು

ಪ್ರ 1: ಅತ್ಯಂತ ಹಿಂದುಳಿದ ಪ್ರದೇಶ ಬಂಟ್ವಾಳ ತಾಲೂಕಿನ ಸಜಿಪ ಮಾರ್ನಬೈಲಿನಲ್ಲಿ ಕಾಲೇಜು ಆರಂಭಿಸಬೇಕು ಎಂಬ ಆಲೋಚನೆ ತಮಗೆ ಹೇಗೆ ಬಂತು?

ಉ : ವೈಯಕ್ತಿಕವಾಗಿ ನಾನು ಶೈಕ್ಷಣಿಕ ಹಾಗೂ ಸಮುದಾಯ ಒಳಿತಿನ ವಿಚಾರದಲ್ಲಿ ಕಾಳಜಿ ಉಳ್ಳವನು ಈ ಕುರಿತು ನನ್ನ ಸಮಾನ ಮನಸ್ಕ    ಸೇಹಿತರುಗಳಾದ ಎ.ಹಕ್ ಅಸದ್ದಿ, ರಿಯಾಜ್ ಬಾವಾ, ಬಿ. ಅಬ್ದುಲ್ ಅಝೀರ್ ಹಸನ್, ಅಬ್ದುಲ್ ಅಝೀರ್ ಅಡ್ವೋಕೇಟ್, ಮನ್ಸೂರ್ ಅಹಮ್ಮದ್ (ಆಜಾದ್), ಬಿ.ಅಬ್ದುಲ್ ಸಲಾಮ್, ಪಿ.ಸಿ ಹಾಸಿರ್, ಬಿ.ಎಂ ಮಮ್ತಾಜ್ ಅಲಿ, ಮೊಹಮ್ಮದ್ ಆರಿಸ್, ಅಬ್ದುಲ್ ಸಮದ್ ಸಿ.ಎ, ಡಾ॥ ಅಖ್ತರ್ ಹುಸೈನ್, ಡಾ॥ ಇಮ್ತಿಯಾಜ್ ಅಹಮ್ಮದ್, ವೈ ಮೊಹಮ್ಮದ್ ಫರ್ಹಾದ್, ನಿಸಾರ್ ಅಹಮ್ಮದ್, ಆಸಿಫ್ ಜುಬೈಲ್ (ಅಮಾಕೋ), ಜೊಹರ್ ಫರ್ವೇಜ್ ಬಾವಾ, ಕೆ.ಮೊಹಮ್ಮದ್ ಹಾರೀಸ್, ವೈ ಅಬ್ದುಲ್ಲ ಜಾವೇದ್, ಸಿರಾಜ್ ಅಹಮ್ಮದ್, ರಫಾಯಿ ಸಿ.ಕೆ. ಎಂ, ಸಪೀಖ್ ಹಸನ್, ಹೈದರ್ ಆಲಿ,ಎಸ್.ಅಬ್ಬಾಸ್ ಹಾಜಿ,ಕೆ.ಸಿ.ಹಮೀದ್, ಖಾಸಿಂ ಅಹಮ್ಮದ್ ಹೆಚ್.ಕೆ, ಅಫ್ರೋರ್ ದುಬೈ, ಕೆ.ಸಿ ಹಮೀದ್, ಪಿ.ಬಿ ಹಮೀದ್ ಇವರೆನ್ನೆಲ್ಲಾ ಸೇರಿಸಿ ಮಂಗಳೂರು ಎಜುಕೇಶನ್ ಎನ್‌ಹ್ಯಾನ್ಸ್‌ಮೆಂಟ್ ಟ್ರಸ್ಟ್ (ರಿ)ನ್ನು 2007-08ರಲ್ಲಿ ಸ್ಥಾಪಿಸಿದೆ. ಮುಂದೆ ನಮ್ಮ ಉದ್ದೇಶಗಳ ಅನುಷ್ಠಾನಕ್ಕಾಗಿ ಸಮೀಪದ ಬಂಟ್ವಾಳ ತಾಲೂಕು ಸಜಿಪಮುನ್ನೂರು ಗ್ರಾಮವನ್ನು ಆಯ್ಕೆ ಮಾಡಿಕೊಂಡೆವು. ಸಾಕಷ್ಟು ಹಿಂದುಳಿದ, ಅಲ್ಪಸಂಖ್ಯಾತರ ಬಾಹುಳ್ಯ ಉಳ್ಳ ಪ್ರದೇಶ ಆಗಿದ್ದು, ಸೂಕ್ತ ಉನ್ನತ ವಿದ್ಯಾಭ್ಯಾಸದ ಸೌಕರ್ಯಗಳಿಲ್ಲದೆ, ಮಂಗಳೂರಿನಂತಹ ದೂರದ ಪ್ರದೇಶಕ್ಕೆ ಹೆಣ್ಣು ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳುಹಿಸುವುದು ಕಷ್ಟಕರ ಮತ್ತು ಕಾಲೇಜುಗಳಲ್ಲಿ ಶಿಕ್ಷಣದ ಖರ್ಚು-ವೆಚ್ಚ, ಶುಲ್ಕಗಳು ಜಾಸ್ತಿ ಇರುವುದರಿಂದ ಬಡ ಕುಟುಂಬಗಳಿಗೆ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸುವುದು ಕಷ್ಟಕರ. ಅದನ್ನೇ ಮುಖ್ಯವಾಗಿರಿಸಿಕೊಂಡು ಅತೀ ಹೆಚ್ಚಿನ ಮಕ್ಕಳಿಗೆ ಪ್ರಯೋಜನವಾಗಲೆಂದು ಇಲ್ಲಿ ಸ್ಥಾಪಿಸಿರುತ್ತೇನೆ.

ಪ್ರ 2: ಪ್ರಸ್ತುತ ಉದ್ಯಮಿಗಳು ಕಾಲೇಜು ಅಥವಾ ವಿದ್ಯಾ ಸಂಸ್ಥೆ ಆರಂಭಿಸುವುದು ಒಂದು ವಾಣಿಜ್ಯ (Commercial) ಉದ್ದೇಶಕ್ಕೆ ಆಗಿರುತ್ತದೆ. ಆದರೆ ತಾವು ಗ್ರಾಮೀಣ ಪ್ರದೇಶದಲ್ಲಿ ಯಾವ ಉದ್ದೇಶದಿಂದ ಆರಂಭಿಸಿದ್ದೀರಿ?

ಉ: ಹೌದು... ಇತ್ತೀಚೆಗೆ ಶಿಕ್ಷಣವೆನ್ನುವಂತದ್ದು ಮಾರಾಟದ ಸರಕಿನಂತಾಗಿದ್ದು, ಅಂಕಪಟ್ಟಿಗಳನ್ನು ತಯಾರಿಸುವ ಕಾರ್ಖಾನೆಗಳಾಗಿದೆ. ಶಿಕ್ಷಣದ ನೈಜ ಮಹಿಳೆಯರೆಲ್ಲರೂ ವಿದ್ಯಾವಂತರಾಗಬೇಕು, ಉದ್ದೇಶ ಮೌಲ್ಯಯುತ ಸಮಾಜ ನಿರ್ಮಾಣ ಆಗಬೇಕು ಮತ್ತು ಆರ್ಥಿಕಾಭಿವೃದ್ದಿಗೂ ಸ್ವಲ್ಪಮಟ್ಟಿಗೆ ಪೂರಕವಾಗಿರಬೇಕು ಎನ್ನುವುದೇ ನಮ್ಮ ಉದ್ದೇಶ.

ಪ್ರ 3: ಭೌತಿಕ ವಿದ್ಯಾಭ್ಯಾಸದ ಜೊತೆಗೆ ಧಾರ್ಮಿಕ ವಿದ್ಯಾಭ್ಯಾಸ ಕೊಡುವುದರ ಉದ್ದೇಶ ಏನು?

ಉ : ಭೌತಿಕ ವಿದ್ಯಾಭ್ಯಾಸ ಒಳ್ಳೆಯ ಉದ್ಯೋಗ, ಸಂಪತ್ತು ಹಾಗೂ ಸಾಮಾಜಿಕ ಗೌರವವನ್ನು ತಂದುಕೊಡಬಲ್ಲದು. ಅದರೊಂದಿಗೆ ಈ ಜಗತ್ತು ಮಾತ್ರ ಅಲ್ಲ, ಪರಲೋಕದ ಪ್ರಜ್ಞೆ, ನೈತಿಕ ಹಾಗೂ ಸಚ್ಚಾರಿತ್ರ್ಯಯುತ ಚೌಕಟ್ಟಿನಲ್ಲಿ ಬದುಕಬೇಕಾದರೆ ಧಾರ್ಮಿಕ ಶಿಕ್ಷಣ ಕೂಡ ಅಗತ್ಯ.

ಪ್ರಶ್ನೆ 4: ಶಿಕ್ಷಣ ಸಂಸ್ಥೆಯ ನಿರ್ವಹಣೆ ತಮಗೆ ತೃಪ್ತಿ ತಂದಿದೆಯೇ?

ಉ : ಖಂಡಿತವಾಗಿಯೂ ತೃಪ್ತಿ ತಂದಿದೆ. ನಮ್ಮ ಎಲ್ಲಾ ನಿರೀಕ್ಷೆಗಳು ಕಾರ್ಯಗತಗೊಂಡಿದ್ದು, ಇದೇ ರೀತಿಯ ಹಲವು ಸಂಸ್ಥೆಗಳು ನಾಡಿನಾದ್ಯಂತ ಸ್ಥಾಪನೆಯಾಗಲು ಪ್ರೇರಣೆ ನೀಡಿದೆ ಎಂದು ಹೇಳಲು ಹೆಮ್ಮೆಪಡುತ್ತೇವೆ. ಈ ಸಂಸ್ಥೆಯ ಸ್ಥಾಪನೆ ಮೂಲಕ ಹೆಣ್ಣು ಮಕ್ಕಳ ಹಕ್ಕನ್ನೂ ಒದಗಿಸಿಕೊಟ್ಟ ತೃಪ್ತಿ ಇದೆ.

ಕೊನೆಯ ಮಾತು :

ಸಜೀಪ ಆಸುಪಾಸಿನ ಎಲ್ಲರಿಗೂ ಈ ಶಿಕ್ಷಣ ಸಂಸ್ಥೆಯು ತನ್ನ ಶಿಕ್ಷಣ ಜ್ಞಾನವನ್ನು ನೀಡುತ್ತಿದ್ದು, ಜ್ಞಾನಾಕಾಂಕ್ಷಿಗಳನ್ನು ಸದಾ ಕೈ ಬೀಸಿ ಕರೆಯುತ್ತಾ ಇದೆ. ಈ ಶಿಕ್ಷಣ ಸಂಸ್ಥೆಯು ನಿರಂತರ ವಿದ್ಯಾದಾನ ನೀಡಲಿ, ಸಮಾಜಕ್ಕೆ ಒಳಿತನ್ನು ಮಾಡಲಿ, ಸಮಾಜದಲ್ಲಿ ಶಾಂತಿ ಸೌಹಾರ್ಧತೆ, ಪರಸ್ಪರ ನಂಬಿಕೆಗಳು ಬೆಳೆಯಲು ಸಹಕಾರಿಯಾಗಲಿ ಪ್ರತಿಯೊಬ್ಬರಿಗೂ ಉತ್ತಮ ಜೀವನವನ್ನು ನಡೆಸಲು ಸ್ಫೂರ್ತಿಯಾಗಲಿ ಸಂಸ್ಥಾಪಕ ಅಧ್ಯಕ್ಷರಾದ ಜನಾಬ್ ಎಸ್.ಎಂ ರಶೀದ್ ಹಾಜಿ ಹಾಗೂ ಅವರೊಂದಿಗೆ ಕೈಜೋಡಿಸಿದ ಎಲ್ಲಾ ಮಿತ್ರಾದಿಗಳಿಗೆ ಸರ್ವಶಕ್ತನಾದ ಅಲ್ಲಾಹನು ಆರೋಗ್ಯ, ದೀರ್ಘಾಯುಷ್ಯ, ಸಂಪತ್ತು ಕರುಣಿಸಲಿ ಎಂದು ಹಾರೈಸುತ್ತೇನೆ.

ಪ್ರತಿಯೊಂದು ಮಗುವು ಹುಟ್ಟುತ್ತಲೇ ವಿಶ್ವ ಮಾನವ ಬೆಳೆಯುತ್ತಲೇ ಅದನ್ನು ನಾವು ಅಲ್ಪ ಮಾನವರನ್ನಾಗಿ ಮಾಡುತ್ತೇವೆ ಮತ್ತೆ ಅದನ್ನು ವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು -ರಾಷ್ಟ್ರ ಕವಿ ಕುವೆಂಪು 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top