ನ್ಯಾಯಾಧಿಕರಣ ಕಾಯ್ದೆ ಅಸಂವಿಧಾನಿಕ; ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

PC: ANI
ಹೊಸದಿಲ್ಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನ್ಯಾಯಾಧಿಕರಣ ಸುಧಾರಣಾ ಕಾಯ್ದೆಯನ್ನು ಅಸಂವಿಧಾನಿಕ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್, ಕಾಯ್ದೆಯನ್ನು ಅನೂರ್ಜಿತಗೊಳಿಸಿದೆ. ತೆರಿಗೆ ಪದ್ಧತಿ, ಪರಿಸರ, ವಿದ್ಯುತ್, ದೂರಸಂಪರ್ಕ ಮತ್ತು ರಿಯಲ್ ಎಸ್ಟೇಟ್ ಹೀಗೆ ವೈವಿಧ್ಯಮಯ ಕ್ಷೇತ್ರಗಳ ವ್ಯಾಜ್ಯವನ್ನು ನಿರ್ಧರಿಸುವ ನ್ಯಾಯಾಧಿಕರಣದ ಸ್ವಾತಂತ್ರ್ಯವನ್ನು ರಕ್ಷಿಸಲು ಸುಪ್ರೀಂಕೋರ್ಟ್ ಹಲವು ಬಾರಿ ನೀಡಿದ ತೀರ್ಪನ್ನು ಅತಿಕ್ರಮಿಸುವ ಪ್ರಯತ್ನದ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ನಿವೃತ್ತಿಗೆ ಒಂದು ದಿನ ಮುನ್ನ ಸಿಜೆಐ ಬಿ.ಆರ್.ಗವಾಯಿ ನೇತೃತ್ವದ ಪೀಠ, ನ್ಯಾಯಮಂಡಳಿಗಳ ಅಧ್ಯಕ್ಷರು ಹಾಗೂ ಸದಸ್ಯರ ಅರ್ಹತೆ ಮಾನದಂಡ, ಅಧಿಕಾರಾವಧಿ ಮತ್ತು ಸೇವಾ ಷರತ್ತುಗಳ ಹೆಸರಿನಲ್ಲಿ ಕಾಲಹರಣ ಮಾಡುವ ಕೇಂದ್ರ ಸರ್ಕಾರದ ನಿರಂತರ ಪ್ರಯತ್ನಗಳಿಗೆ ಅಸಮ್ಮತಿ ಸೂಚಿಸಿದೆ. ಜತೆಗೆ ನ್ಯಾಯಾಧಿಕರಣ ಸುಧಾರಣಾ ಸುಗ್ರೀವಾಜ್ಞೆ-2021ನ್ನು ತಳ್ಳಿಹಾಕಿದ ವಾರದ ಒಳಗಾಗಿ ಸರ್ಕಾರ ಇದನ್ನು ಕಾನೂನಾಗಿ ಪರಿವರ್ತಿಸಲು ಸಂಸತ್ತಿನಲ್ಲಿ, ಸುಗ್ರೀವಾಜ್ಞೆಯ ನಿಬಂಧನೆಗಳನ್ನೇ ಹೋಲುವ ಮಸೂದೆ ಮಂಡಿಸಿರುವ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಕೆಲವೊಂದು ನಿಬಂಧನೆಗಳನ್ನು ಮಾತ್ರ ಆಲಂಕರಿಕವಾಗಿ ಬದಲಿಸಿ ಕಾಯ್ದೆಯಾಗಿ ರೂಪಿಸುವ ಪ್ರಯತ್ನ ಮಾಡಿ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಜ್ಞಾಪೂರ್ವಕವಾಗಿ ಉಲ್ಲಂಘಿಸುವ ಕ್ರಮದ ಬಗ್ಗೆ ಸರ್ಕಾರಕ್ಕೆ ನ್ಯಾಯಪೀಠ ಛೀಮಾರಿ ಹಾಕಿದ್ದು, "ನ್ಯಾಯಾಧಿಕರಣ ಸಧಾರಣಾ ಕಾಯ್ದೆ-2021, ಸುಪ್ರೀಂಕೋರ್ಟ್ ತಳ್ಳಿಹಾಕಿದ ಸುಗ್ರೀವಾಜ್ಞೆಯ ಪ್ರತಿರೂಪ. ಹೊಸ ಬಾಟಲಿಯಲ್ಲಿ ಹಳೆ ಮದ್ಯ ಇದ್ದಂತೆ. ಆದರೆ ಈ ಮದ್ಯ ನ್ಯಾಯಾಂಗಕ್ಕೆ ರುಚಿಕರ ಎನಿಸದು. ಆದರೆ ಬಾಟಲಿ ಕೇವಲ ಬೆರಗುಗೊಳಿಸಬಲ್ಲದು" ಎಂದು ಹೇಳಿದೆ.
ಈ ತೀರ್ಪಿನಿಂದಾಗಿ ಹೊಸ ಕಾಯ್ದೆಯ ಜಾರಿಗೆ ತಡೆ ಉಂಟಾಗಿದ್ದು, ನ್ಯಾಯಮಂಡಳಿಗಳ ಅಧ್ಯಕ್ಷರು ಮತ್ತು ಸದಸ್ಯರ ಸೇವಾ ಷರತ್ತುಗಳು ಮೂಲ ಕಾಯ್ದೆಗಳ ಅನುಸಾರವಾಗಿಯೇ ಮುಂದುವರಿಯಲಿವೆ.







