-

ಅರಿವಿನ ಹಾಡುಗಳ ಜನಾರ್ದನ ಕೆಸರಗದ್ದೆ

-

‘‘ಒಟ್ಟು ಸಮಾಜ ಹಾಳಾಗಿದೆ, ವ್ಯವಸ್ಥೆ ಕಲುಷಿತಗೊಂಡಿದೆ, ತಕ್ಷಣದ ಲಾಭಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚಾಗಿದೆ. ಹಾಗಂತ ಸರಿ ಮಾಡುವ ನೆಪದಲ್ಲಿ ಸಮಾಜದ ಮೇಲೆ ಸವಾರಿ ಮಾಡುವುದು ಸಲ್ಲ; ಉಗ್ರ ಕ್ರಮಕ್ಕೆ ಮುಂದಾಗುವುದು ಮಾನವಂತರು ಮಾಡುವಂತಹದ್ದಲ್ಲ; ರಿಪೇರಿ ಸಾಧ್ಯವೇ ಇಲ್ಲ ಎಂದು ಸಿನಿಕರಾಗುವುದೂ ಸರಿ ಇಲ್ಲ. ಬದಲಿಗೆ, ಅದರೊಳಗೆ ಒಂದಾಗಿ ಹೊಸ ಹಾದಿ ಹುಡುಕಬೇಕು; ಅವರನ್ನು ಒಳಗೊಳಿಸಿಕೊಂಡೇ ಅವರಲ್ಲಿ ಅರಿವು ಮೂಡಿಸಬೇಕು; ಸಹ್ಯ, ಸಮಾನ ಸಮಾಜವನ್ನು ಕಟ್ಟಬೇಕು..’’ ಎನ್ನುತ್ತಾರೆ ಜನಕವಿ ಜನಾರ್ದನ ಕೆಸರಗದ್ದೆ.

ಕಳೆದ 25 ವರ್ಷಗಳಿಂದ ಕರ್ನಾಟಕದಾದ್ಯಂತ ಸುತ್ತಾಟ, ಹೋರಾಟ, ಸಂಘಟನೆ, ಆಂದೋಲನ ರೂಪಿಸುವಲ್ಲಿ ತಮ್ಮದೇ ಆದ ಭಿನ್ನ ಹಾದಿ ಹುಡುಕಿಕೊಂಡಿರುವ; ಅರಿವಿನ ಹಾಡುಗಳ ಮೂಲಕ ಆ ಜನಚಳವಳಿಗಳ ವಲಯದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿರುವ; ಸ್ಥಳೀಯರನ್ನೇ ಜನನಾಯಕರನ್ನಾಗಿಸಿ, ಜಾಗೃತಿ ಮೂಡಿಸಿ, ಪ್ರಭುತ್ವವನ್ನು ಪ್ರಶ್ನಿಸಿ ನೆಲ-ಜಲ ಸಂರಕ್ಷಿಸಿರುವ; ಸಾಮಾಜಿಕ ಬದಲಾವಣೆಗೆ ಕಾರಣಕರ್ತರಾಗಿರುವ ಜನಾರ್ದನ ಕೆಸರಗದ್ದೆಯವರಿಗೆ ಇದೇ ಜ.7ರಂದು ಅವರ ಒಡನಾಡಿಗಳು, ಅವರನ್ನೇ ಗೌರವಿಸಿಕೊಳ್ಳುವ ನೆಪದಲ್ಲೊಂದು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಜನಾರ್ದನರಿಗೆ ಜನಪ್ರೀತಿಯನ್ನು ಸಮರ್ಪಿಸುತ್ತಿದ್ದಾರೆ.

ಈ ರೀತಿಯ ಸಭೆ, ಸನ್ಮಾನ, ಕೀರ್ತಿ, ಕಿರೀಟ, ಬಹಿರಂಗ ಬೋಪರಾಕ್‌ಗಳನ್ನು ಇಷ್ಟಪಡದ, ತಮ್ಮಷ್ಟಕ್ಕೆ ತಾವು ತೆರೆಮರೆಯಲ್ಲಿದ್ದು ಮಾಡಬೇಕಾದ ಕೆಲಸ ಕಾರ್ಯದಲ್ಲಿ ಮುಳುಗಿಹೋಗುವ ಜಾಯಮಾನದ ಜನಾರ್ದನರನ್ನು ಕೇಳಿದರೆ, ‘‘ಅಯ್ಯೋ, ಅಂತಹ ದೊಡ್ಡ ವ್ಯಕ್ತಿ ನಾನಲ್ಲ, ಅದು ನನಗಾಗಲ್ಲ. ಅವರು, ನಾವೊಂದಿಷ್ಟು ಜನ ನಮ್ಮ ನಂಬಿಕೆಯನ್ನು-ನಡಿಗೆಯನ್ನು ಗೌರವಿಸಿಕೊಳ್ಳುತ್ತಿದ್ದೇವೆ, ನಮ್ಮಿಂದಿಗಿರಿ ಎಂದರು, ಇರುತ್ತೇನೆ’’ ಎಂದರು. ಹೌದು, ಜನಾರ್ದನ ಇರುವುದೇ ಹಾಗೆ. ಪ್ರಚಾರ-ಪ್ರಸಿದ್ಧಿಗಳಿಂದ ದೂರ. ಜನರ ಕಣ್ಣಿಂದಲೂ ದೂರ. ಪ್ರತಿ ಕೆಲಸಕ್ಕೂ ಚೌಕಟ್ಟಿನಾಚೆಗೆ ನಿಂತು ಚಿಂತಿಸುವ, ಸಮಸ್ಯೆ ಎದುರಾದಾಗ ಅನುಭವಗಳ ಮೊರೆ ಹೋಗಿ ಪರಿಹಾರ ಕಂಡುಕೊಳ್ಳುವವರು. ಜಾತಿ, ಧರ್ಮ, ಲಿಂಗ ತಾರತಮ್ಯಗಳು ಅಡಿಗಡಿಗೆ ಅಡ್ಡ ಬಂದರೂ ಅರಗಿಸಿ, ಸುತ್ತಲ ಸಮಾಜವನ್ನು ಸಹ್ಯಗೊಳಿಸಿಕೊಂಡೇ ಮನುಷ್ಯಪ್ರೀತಿಯನ್ನು ಪಸರಿಸುವ ಪಾಠ ಹೇಳಿಕೊಟ್ಟವರು. ಸಾಮಾಜಿಕ ಸೇವಾ ಪ್ರಜ್ಞೆಯನ್ನು ಪೋಷಿಸಿದವರು. ಸಾಮಾಜಿಕ ಕಾರ್ಯವನ್ನು ನಾವು ನಿಭಾಯಿಸಲೇಬೇಕಾದ ಜವಾಬ್ದಾರಿ ಎಂದು ಅರ್ಥಮಾಡಿಸಿದವರು. ನಾವು ಬದುಕಿದರಷ್ಟೇ ಸಾಲದು, ಸುತ್ತಲ ಸರೀಕರ ಬದುಕೂ ಹಸನಾಗಬೇಕೆಂದು ಹಂಬಲಿಸುವಂತೆ, ಅದಕ್ಕಾಗಿ ತಮ್ಮ ಕೈಲಾದ ಬುದ್ಧಿ-ಶಕ್ತಿ-ಶ್ರಮ ಸುರಿಯುವಂತೆ ಪ್ರೇರೇಪಿಸಿದವರು.

‘ಸಂವಾದ’ ಎಂಬ ಸರಕಾರೇತರ ಸಂಸ್ಥೆಯಲ್ಲಿ ಕಾರ್ಯಕ್ರಮ ಸಂಯೋಜಕರಾಗಿ ಕೆಲಸ ಮಾಡುತ್ತಿರುವ ಜನಾರ್ದನ, ಯುವಜನರನ್ನು ಸಬಲೀಕರಣಗೊಳಿಸುವ ಕಾಯಕದಲ್ಲಿ ನಿರತರಾದವರು. ಕೃಷಿ, ಪರಿಸರ, ಯುವ ಸಬಲೀಕರಣ, ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಪರಿಣತರು. ಸರಕಾರದ ಇಲಾಖೆಗಳಿಗೆ, ಸಂಘ ಸಂಸ್ಥೆಗಳಿಗೆ, ಆಸ್ಪತ್ರೆಗಳ ಸಮಿತಿಗಳಿಗೆ, ವಿವಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹೋಗಿ ತಮ್ಮ ಅನುಭವವನ್ನು ಹಂಚಿಕೊಂಡವರು. ಮೂಲತಃ ಕರಾವಳಿಯವರು. ಕೆಸರಗದ್ದೆ, ಕಾರ್ಕಳ, ಮೂಡುಬಿದಿರೆ, ಮಂಗಳೂರುಗಳಲ್ಲಿ ಆಟ-ಪಾಠ ಕಲಿತು ಬೆಳೆದವರು. ಅಪ್ಪನ ಅಗ್ರಸ್ಸೀವ್ ಹೋರಾಟವನ್ನು ಬಾಲ್ಯದಲ್ಲಿಯೇ ತಲೆತುಂಬಿಕೊಂಡವರು. ಈ ಹಿನ್ನೆಲೆಯ ನೀವು ನಿಮ್ಮ ಹೋರಾಟಗಳಲ್ಲಿ ಇಷ್ಟೊಂದು ಸಹನೆ ಸಾಧ್ಯವಾಗಿದ್ದು ಹೇಗೆ ಎಂದು ಪ್ರಶ್ನಿಸಿದರೆ, ‘‘ಅಪ್ಪ-ಅಮ್ಮ ಬೀಡಿ ಕಟ್ಟುವ ಕಾರ್ಮಿಕರು. ಅಪ್ಪ ಕಮ್ಯುನಿಸ್ಟ್ ಪಾರ್ಟಿ ವರ್ಕರ್, ಅಮ್ಮ ಪಂಚಾಯತ್‌ಮೆಂಬರ್. ಮನೆಯಲ್ಲಿಯೇ ಮಾರ್ಕ್ಸ್-ಅಂಬೇಡ್ಕರ್ ಪರಿಚಯವಾಗಿತ್ತು. ಚಿಕ್ಕವನಿರುವಾಗಲೇ ಕಾರ್ಮಿಕರೊಂದಿಗೆ ಒಡನಾಟವಿತ್ತು. ಪ್ರತಿಭಟನೆ, ರ್ಯಾಲಿ, ಧರಣಿ, ಸತ್ಯಾಗ್ರಹಗಳ ಸಹವಾಸವಿತ್ತು. ಮೇ ಡೇ ಅಂದರೆ ಏನು ಎಂಬುದು ತಿಳಿದಿತ್ತು. ಬೆನ್ನಿಗಂಟಿಕೊಂಡ ಬಡತನ ಎಲ್ಲವನ್ನು ಮಾಗಿಸಿತ್ತು’’ ಎನ್ನುತ್ತಾರೆ.

ಯುವ ಸಬಲೀಕರಣದತ್ತ ನಿಮ್ಮ ಒಲವು ಹೆಚ್ಚು, ಹಾಗೆಯೇ ಯುವಜನತೆ ನಿಮ್ಮನ್ನು ಗುರುಗಳಾಗಿ ಕಾಣುವುದೂ ಇದೆಯಲ್ಲ ಎಂದರೆ, ‘‘ಮಂಗಳೂರಿನಲ್ಲಿ ಎಂಎಸ್‌ಡಬ್ಲ್ಯೂ ಮುಗಿಸಿದ ಮೇಲೆ ಮನಸ್ಸು ಗ್ರಾಮೀಣಾಭಿವೃದ್ಧಿಯತ್ತ ಹರಿಯಿತು. ಯುವಜನರು ಓದಿ ಕೆಲಸ ಹುಡುಕಿಕೊಂಡು ದ್ವೀಪಗಳಾಗುವುದಲ್ಲ, ಹಳ್ಳಿಗಳನ್ನು ನೋಡದೆ ಆಡಳಿತ ನಡೆಸುವುದಲ್ಲ, ಜಾತಿ-ಧರ್ಮ-ರಾಜಕಾರಣದ ಬಲೆಗೆ ಸಿಲುಕಿ ಬಂದಿಯಾಗುವುದಲ್ಲ; ಸುತ್ತಲ ಸಮಾಜವನ್ನು ಸಹನೆಯಿಂದ ನೋಡುವುದು, ದಮನಿತರ ಬದುಕಿನಲ್ಲಿ ಬೆಳಕು ತರುವುದು, ಆ ಮೂಲಕ ಸಮಸಮಾಜ ನಿರ್ಮಾಣ ಮಾಡುವುದು.. ಎನ್ನುವ ಅರಿವನ್ನು ಅವರಲ್ಲಿ ಬಿತ್ತುವತ್ತ ಮನಸ್ಸು ಹರಿಯಿತು. ಸಂವಾದ ಸಂಸ್ಥೆ ಈ ನನ್ನ ಕನಸಿಗೆ ವೇದಿಕೆಯೊದಗಿಸಿತು. ದೊಡ್ಡಬಳ್ಳಾಪುರ ನನ್ನ ಕಾರ್ಯಕ್ಷೇತ್ರವಾಯಿತು. ಅದು ನನ್ನ ಜವಾಬ್ದಾರಿ ಎಂದರಿತು ಮಾಡುತ್ತಿದ್ದೇನೆ. ನನಗೆ ಗೊತ್ತಿರುವುದನ್ನು ಮತ್ತೊಂದಿಷ್ಟು ಜನಕ್ಕೆ ಕಲಿಸುತ್ತಿದ್ದೇನೆ, ಅಷ್ಟೆ’’ ಎಂದರು.

ಜನಾರ್ದನ ದೊಡ್ಡಬಳ್ಳಾಪುರದ ಸುತ್ತಮುತ್ತ ಕಟ್ಟಿದ ಜನಹೋರಾಟಗಳು, ಎದುರಾದ ಸವಾಲು-ಸಮಸ್ಯೆಗಳು, ಕಂಡುಕೊಂಡ ಪರಿಹಾರಗಳು ನಿಜಕ್ಕೂ ಅಧ್ಯಯನಯೋಗ್ಯ. ಕೈಗಾರಿಕೆಗಳಿಂದ ಆಗುತ್ತಿದ್ದ ಜಲಮಾಲಿನ್ಯವನ್ನು ತಡೆದದ್ದು, ಅರ್ಕಾವತಿ ನದಿಮೂಲ ಪುನಶ್ಚೇತನ ಆಂದೋಲನದಲ್ಲಿ ಭಾಗಿಯಾಗಿದ್ದು ಹಾಗೂ ನದಿ ಸಂಪರ್ಕಿಸುವ ಸಣ್ಣ ಕಾಲುವೆಗಳ ಕಾಮಗಾರಿ ನಿಲ್ಲದಂತೆ ನೋಡಿಕೊಂಡದ್ದು, ನಂದಿ ಬೆಟ್ಟದ ಬುಡದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಗೆ ತಡೆಯೊಡ್ಡಿದ್ದು ಸುಲಭದ ಕೆಲಸವಲ್ಲ. ಸಾಮಾನ್ಯರಿಗೆ ಸಾಧ್ಯವೂ ಇಲ್ಲ. ಕೈಗಾರಿಕೆ ಎಂದಾಕ್ಷಣ, ಬಂಡವಾಳ ಹೂಡಿರುವ ಕೈಗಾರಿಕೋದ್ಯಮಿ, ಆತನ ಹಣ-ಪ್ರಭಾವಕ್ಕೊಳಗಾಗಿರುವ ರಾಜಕಾರಣಿಗಳು, ಪೊಲೀಸರು ಎಲ್ಲರೂ ಅವರ ಪರವಿರುತ್ತಾರೆ. ಹೇಗೆ ಇದೆಲ್ಲ ಸಾಧ್ಯವಾಗಿದ್ದು ಎಂದರೆ, ‘‘ದೊಡ್ಡಬಳ್ಳಾಪುರದ ಸುತ್ತಮುತ್ತ ಸುಮಾರು ಕೈಗಾರಿಕೆಗಳಿವೆ. ಅವುಗಳಿಂದ ಜಲಮಾಲಿನ್ಯ, ವಾಯುಮಾಲಿನ್ಯವಾಗುತ್ತಿದ್ದುದು ನಿಜ. ಮೊದಲಿಗೆ ನಾವು ಅವುಗಳಿಂದ ಜನರಿಗೆ ಆಗುತ್ತಿದ್ದ ಸಮಸ್ಯೆಗಳತ್ತ ಗಮನ ಹರಿಸಿ, ಜನರನ್ನು ಜಾಗೃತಗೊಳಿಸುವತ್ತ ಮುಂದಾದೆವು. ಆ ನಿಟ್ಟಿನಲ್ಲಿ ಕರಪತ್ರ ಹಂಚಿ, ಬೀದಿನಾಟಕ ಮಾಡಿ, ಜನಕವಿತೆಗಳನ್ನು ಕಟ್ಟಿ ಜನರ ಮುಂದಿಟ್ಟೆವು. ನಿಧಾನವಾಗಿ ಜನ ಸ್ಪಂದನೆ ದೊರಕಿತು. ಸ್ಥಳೀಯ ಜನರನ್ನೇ ನಾಯಕರನ್ನಾಗಿಸಿ ಹೋರಾಟಕ್ಕೆ ಮುಂದಾದೆವು. ಆ ಹೋರಾಟ ಸುಮಾರು 2 ವರ್ಷಗಳ ಕಾಲ ನಡೆಯಿತು. ಕೊನೆಗೆ ಎರಡು ಕೈಗಾರಿಕೆಗಳು ತಪ್ಪನ್ನು ಒಪ್ಪಿಕೊಂಡವು. ನಮ್ಮ ಹೋರಾಟಕ್ಕೆ ಜಯ ಸಿಕ್ಕಿತು. ಹಾಗಂತ ಫ್ಯಾಕ್ಟರಿ ಬಂದ್ ಮಾಡಿಸುವುದು ನಮ್ಮ ಉದ್ದೇಶವಲ್ಲ, ಸಮಸ್ಯೆಗೆ ಪರಿಹಾರವೂ ಅಲ್ಲ. ಫ್ಯಾಕ್ಟರಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯವಾದ ಟ್ರೀಟ್‌ಮೆಂಟ್ ಪ್ಲಾಂಟ್ ಅಳವಡಿಸುವ ಮೂಲಕ, ಅವರೂ ಉಳಿದು ಜನರನ್ನೂ ಉಳಿಸಲಾಯಿತು’’ ಎಂದರು. ಆ ನಂತರ ಶುರುವಾದ ಅರ್ಕಾವತಿ ನದಿ ಪುನಶ್ಚೇತನ ಆಂದೋಲನದ ಬಗ್ಗೆ ಕೇಳಿದಾಗ, ‘‘ಸ್ವರಾಜ್ ಸಂಸ್ಥೆಯವರು ಶುರು ಮಾಡಿದ ಆಂದೋಲನವದು. ಜನಪರ ಕಾರ್ಯಕ್ರಮವಾದ್ದರಿಂದ ನಾವೂ ಅದರೊಂದಿಗೆ ಕೈ ಜೋಡಿಸಿದೆವು. ಕೃಷಿಭೂಮಿ ಒತ್ತುವರಿ ಮತ್ತು ನಗರೀಕರಣದಿಂದ ಕಣ್ಮರೆಯಾಗಿದ್ದ ಅರ್ಕಾವತಿಯನ್ನು ಹುಡುಕಿ ಹೊರಟಾಗ, ಅದಕ್ಕೆ ಪರಿಸರ ಪ್ರೇಮಿಗಳು, ಸಂಘ ಸಂಸ್ಥೆಗಳು ಬೆಂಬಲಿಸಿದವು. ಸರಕಾರದ ಮೇಲೆ ಒತ್ತಡ ಹೆಚ್ಚಾಗಿ ಸರ್ವೆಗೆ ಮುಂದಾಯಿತು. ಜೊತೆಗೆ ಸರಕಾರ ಪುನಶ್ಚೇತನದ ನೆಪದಲ್ಲಿ ಮಾಲಿನ್ಯ ನಿಯಂತ್ರಣ, ಕೆರೆ-ಕಟ್ಟೆಗಳ ದುರಸ್ತಿ ಹಾಗೂ ನೀರಾವರಿ ಹಾಗೂ ಕೃಷಿ ಪದ್ಧತಿ ಬದಲಾವಣೆಯತ್ತ ಗಮನ ಹರಿಸಿತು. ಅಷ್ಟೇ ಅಲ್ಲದೆ, ಬೆಂಗಳೂರಿಗೆ ನೀರು ಸರಬರಾಜಾಗುತ್ತಿದ್ದ ತಿಪ್ಪಗೊಂಡನಹಳ್ಳಿ ಮತ್ತು ಹೆಸರಘಟ್ಟ ಜಲಾಶಯಗಳು ಬತ್ತಿಹೋಗಿದ್ದು, ಜಲಾನಯನ ಸಂರಕ್ಷಣೆಗೆ ಸರಕಾರ 2003ರಲ್ಲಿ ನೋಟಿಫಿಕೇಷನ್ ಹೊರಡಿಸಿತು. ‘‘ನಾವು ಸರಕಾರದ ನೋಟಿಫಿಕೇಷನ್ ಇಟ್ಟುಕೊಂಡು ನಂದಿ ಬೆಟ್ಟದ ಬುಡದಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ವಿರುದ್ಧ ಹೋರಾಟ ರೂಪಿಸಿದೆವು. ಅರ್ಕಾವತಿ ಉಗಮವೇ ನಂದಿ ಬೆಟ್ಟ. ಅಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯಿಂದ ನದಿಪಾತ್ರವೇ ಇಲ್ಲದಂತಾಗಿತ್ತು. ಈ ಗಣಿ ಮಾಲಕರ ವಿರುದ್ಧ ಹೋರಾಡುವುದು ಕಷ್ಟದ ಕೆಲಸವೆಂದು ಗೊತ್ತಿದ್ದ ನಾವು, ಸುತ್ತಲ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರಲ್ಲಿ ಪರಿಸರದ ಬಗೆಗೆ ಅರಿವು ಮೂಡಿಸಿ, ಸ್ಥಳೀಯ ರೈತಸಂಘದ ಕಾರ್ಯಕರ್ತರನ್ನೇ ಮುಂದೆ ಮಾಡಿ ಹೋರಾಟಕ್ಕಿಳಿದೆವು. ಸ್ಥಳೀಯರು ಎದ್ದು ನಿಲ್ಲುತ್ತಿದ್ದಂತೆ, ಪ್ರಶ್ನೆ ಮಾಡುತ್ತಿದ್ದಂತೆ ಜಿಲ್ಲಾಡಳಿತವೂ ಜನರ ನೆರವಿಗೆ ನಿಂತು, ಗಣಿಗಾರಿಕೆ ಬಂದ್ ಆಯಿತು. ಇದು ಸ್ಥಳೀಯ ರೈತರ ಹೋರಾಟಕ್ಕೆ ಸಲ್ಲಬೇಕಾದ ಜಯ. ‘‘ನಂದಿ ಬೆಟ್ಟದ ಗಣಿಗಾರಿಕೆ ನಿಲ್ಲಿಸುವುದು ಏಕೆ ಅಷ್ಟು ಮುಖ್ಯವಾಗಿತ್ತೆಂದರೆ, ಅರ್ಕಾವತಿ ನದಿ ಹುಟ್ಟುವುದೇ ನಂದಿಯಲ್ಲಿ. ಗಣಿಗಾರಿಕೆಯಿಂದ ಉಗಮ ಸ್ಥಾನವೇ ಬತ್ತಿಹೋಗಿತ್ತು. ಅದರಿಂದ ಅಂತರ್ಜಲವೂ ಕುಸಿದಿತ್ತು. ಅದು ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರಿತ್ತು. ಇದು ಸ್ಥಳೀಯ ಕೃಷಿಕರಿಗೆ ಅರ್ಥವಾಯಿತು. ಜಾಗೃತರಾದರು. ಪ್ರಭುತ್ವವನ್ನು ಪ್ರಶ್ನಿಸುವಂತಾದರು. ಜೊತೆಗೆ ಅರ್ಕಾವತಿ ನದಿ ಪುನಶ್ಚೇತನ ಆಂದೋಲನಕ್ಕೆ ಸರಕಾರವೂ ಬೆಂಬಲಿಸಿತು. ಇದರ ಪರಿಣಾಮವಾಗಿ ನದಿ ಮೂಲ ನಂದಿ ಬೆಟ್ಟದಿಂದ ಸಂಗಮದವರೆಗೆ, ಸುಮಾರು 1,500 ಚ.ಕಿ.ಮೀ. ಅರ್ಕಾವತಿ ನದಿಪಾತ್ರ ಸರ್ವೇಯಿಂದ ಬಹಿರಂಗವಾಯಿತು. ಆನಂತರ ನದಿಗೆ ನೀರು ಹರಿದು ಬರಲು, ಹೊರಹೋಗಲು ಸಂಪರ್ಕ ಕಾಲುವೆಗಳ ಕಾಮಗಾರಿ ಶುರುವಾಯಿತು. ಅದು 3 ಹಂತಗಳಲ್ಲಿ ನಡೆಯುವ 23 ಕೋಟಿ ರೂ.ಗಳ ಕಾಮಗಾರಿ. ಯಥಾಪ್ರಕಾರ ಶೇ. 60 ಕೆಲಸ ಮಾಡಿ ಗುತ್ತಿಗೆದಾರರು ಸುಮ್ಮನಾದರು. ಆದರೆ ನಾವು ಸುಮ್ಮನಾಗಲಿಲ್ಲ. 30 ಸಾವಿರ ಕರಪತ್ರಗಳನ್ನು ಹಂಚಿ, ಸುತ್ತಮತ್ತಲ ಗ್ರಾಮಗಳ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ನಿರತರಾದೆವು. ಕೆಲವರು ಆರ್‌ಟಿಐ ಮೂಲಕ ದಾಖಲೆ ಕೇಳಿದರು. ಇದರಿಂದ ಸರಕಾರಿ ಕಡತಗಳಲ್ಲಿ ಆಗಲೇ ಶೇ.90 ಕಾಮಗಾರಿ ಮುಗಿದು ಬಿಲ್ ಕೂಡ ಪಾಸ್ ಆಗಿದ್ದ ಸತ್ಯಾಂಶ ಹೊರಬಿತ್ತು. ಮತ್ತೆ ಹೋರಾಟ ಮುಂದುವರಿಸಿದಾಗ, ಕಾಮಗಾರಿ ಮತ್ತೆ ಶುರುವಾಯಿತು.’’ ‘‘ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿದ್ದ ಕರೀಗೌಡರ ಕೃಷಿ ಬಗೆಗಿನ ಪ್ರೀತಿ ಮತ್ತು ಕಾಳಜಿಯಿಂದಾಗಿ, ಅರ್ಕಾವತಿ ನದಿ ಪಾತ್ರದ ಕೆರೆ ಕಟ್ಟೆಗಳ ಹೂಳೆತ್ತುವ ಕೆಲಸ ಸುಗಮವಾಗಿ ಜರುಗಿತು. ಮಳೆಗಾಲದಲ್ಲಿ ಕೆರೆ ಕಟ್ಟೆಗಳು ತುಂಬಿದವು, ಅಂತರ್ಜಲದ ಹರಿವು ಹೆಚ್ಚಾಯಿತು. ಕೃಷಿ ಚಟುವಟಿಕೆಗಳು ಚಿಗುರತೊಡಗಿತು. ಗ್ರಾಮೀಣ ಭಾಗದ ಯುವಜನರು ತಮ್ಮ ಸುತ್ತಲ ಆಗುಹೋಗುಗಳನ್ನು ಗಮನಿಸಬೇಕು, ಅವುಗಳಲ್ಲಿ ಭಾಗಿಯಾಗಬೇಕು, ಬದಲಾವಣೆ ತರಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಅದು ಆಗ್ತಾ ಇದೆ. ಹಾಗಂತ ಇದೆಲ್ಲ ನನ್ನ ಕೆಲಸವಲ್ಲ. ಸಾಮೂಹಿಕ ಕಾರ್ಯಕ್ರಮ. ನನ್ನದು ಒಂದು ಪಾತ್ರ ಅಷ್ಟೆ..’’ ಎನ್ನುವ ಜನಾರ್ದನ, ಈಗಲೂ ಮರೆಯಲ್ಲಿದ್ದುಕೊಂಡೇ ಮಹತ್ತರವಾದುದನ್ನು ಮಾಡುತ್ತಲೇ ಇರುವ ಸರಳ ಸಜ್ಜನ. ಸಂಕೋಚಗಳ ಮುದ್ದೆಯಂತಿರುವ ಜನಾರ್ದನ ಇಲ್ಲಿಯವರೆಗೆ ಲೆಕ್ಕವಿಲ್ಲದಷ್ಟು ಜನಹೋರಾಟಗಳಲ್ಲಿ ಪಾಲ್ಗೊಂಡಿದ್ದಾರೆ. ಹೋರಾಟಕ್ಕೆ ಬೇಕಾದ ಬೀದಿನಾಟಕಗಳನ್ನು ಬರೆದು ಆಡಿಸಿದ್ದಾರೆ. ಹೋರಾಟದ ಹಾಡುಗಳನ್ನು ರಚಿಸಿ, ರಾಗ ಹಾಕಿ ಕಲಿಸಿಕೊಟ್ಟಿದ್ದಾರೆ. ಆ ಹಾಡುಗಳು ನಾಡಿನ ಎಲ್ಲ ಜೀವಪರ, ಜನಮುಖಿ ಹೋರಾಟಗಾರರ ನಾಲಗೆಯ ಮೇಲೆ ನಲಿದಾಡುತ್ತಾ, ಅರಿವಿನ ಹಾಡುಗಳಾಗಿ ಎಲ್ಲರೆದೆಯಲ್ಲಿ ಹರಿಯುತ್ತಿವೆ. ಜನಮಾನಸದಲ್ಲಿ ಬೆರೆತುಹೋಗಿವೆ. ಇಂತಹ ಜನಕವಿ ಜನಾರ್ದನ್‌ರ ಸಮಾಜಮುಖಿ ಹೋರಾಟಗಳು, ಅವುಗಳಿಂದಾದ ಬದಲಾವಣೆಗಳು ಮತ್ತೊಂದಿಷ್ಟು ಜನರಿಗೆ ಪ್ರೇರಣೆಯಾಗಲಿ. ಅವರ ಮಾನವಪ್ರೀತಿ, ಕಾಳಜಿ, ಕರುಣೆ ಎಲ್ಲರೆದೆಯಲ್ಲೂ ಹರಿಯಲಿ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top