ಅಕ್ರಮ ಸಾಗಾಟ: 16 ಜಾನುವಾರುಗಳು ವಶ
ಕೋಟ, ಫೆ.15: ಬೆಳಗಾವಿಯಿಂದ ದಾವಣಗೆರೆ ಮಾರ್ಗವಾಗಿ ಕೇರಳದ ಕಸಾಯಿಖಾನೆಗೆ ಕಂಟೇನರ್ ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 16 ಜಾನುವಾರುಗಳನ್ನು ಕೋಟ ಪೊಲೀಸರು ಸಾಯಿಬ್ರಕಟ್ಟೆ ಚೆಕ್ಪೋಸ್ಟ್ ಸಮೀಪ ಫೆ.15ರಂದು ಬೆಳಗಿನ ಜಾವ ವಶಪಡಿಸಿಕೊಂಡಿದ್ದಾರೆ.
ಲಾರಿಯಲ್ಲಿದ್ದ ಇಮ್ತಿಯಾಜ್ ಲಾಲ್ಖಾನ್, ದಾದು, ತಬ್ರೇಜ್ ಬೆಪ್ಪಾಯಿ ಹಾಗೂ ಲಾರಿಗೆ ಬೆಂಗಾವಲಾಗಿ ಬಂದ ಕಾರಿನಲ್ಲಿದ್ದ ಅಬ್ದುಲ್ ರವೂಫ್ನನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿದ್ದ ಬಾಬು ಸೇರಿದಂತೆ ಇಬ್ಬರು ಕಾರಿನೊಂದಿಗೆ ಪರಾರಿಯಾದರು.
5.60ಲಕ್ಷ ರೂ. ಮೌಲ್ಯದ 14 ಬಿಳಿ ಬಣ್ಣದ ಎತ್ತು ಹಾಗೂ 80ಸಾವಿರ ರೂ. ಮೌಲ್ಯದ 2 ಕಪ್ಪು ಎತ್ತುಗಳು, 8,00,000ರೂ. ಮೌಲ್ಯದ ಲಾರಿ, ನಾಲ್ಕು ಮೊಬೈಲು ಮತ್ತು 11,700ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story