ಡ್ರಗ್ಸ್ ಪ್ರಕರಣ: ಆ್ಯಂಕರ್ ಅನುಶ್ರೀ ವಿಚಾರಣೆಗೆ ಹಾಜರು
ಮಂಗಳೂರು ಸಿಸಿಬಿ ಪೊಲೀಸರಿಂದ ವಿಚಾರಣೆ
ಮಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ನೋಟಿಸ್ ಪಡೆದಿರುವ ನಟಿ, ನಿರೂಪಕಿ ಅನುಶ್ರೀ ಶನಿವಾರ ಬೆಳಗ್ಗೆ ಮಂಗಳೂರು ಸಿಸಿಬಿ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ನಲ್ಲಿ ತಿಳಿಸಿದ್ದರು. ಆದರೆ ಅನುಶ್ರೀ ಸೆ.25ರಂದೇ ಹಾಜರಾಗುವುದಾಗಿ ತಿಳಿಸಿದ್ದರು. ಅದರಂತೆ ಪೊಲೀಸರು ಅನುಶ್ರೀ ಶುಕ್ರವಾರ ವಿಚಾರಣೆಗೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಮಾಧ್ಯಮದವರು ಕೂಡ ಎಸಿಪಿ ಕಚೇರಿ ಎದುರು ಅನುಶ್ರೀ ಆಗಮನದ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದರು. ಆದರೆ ಸಂಜೆಯವರೆಗೂ ಅನುಶ್ರೀ ವಿಚಾರಣೆಗೆ ಹೋಗಿರಲಿಲ್ಲ. ಇಂದು ಬೆಳಗ್ಗೆಯೇ ಸಿಸಿಬಿ ಕಚೇರಿಗೆ ಆಗಮಿಸಿದ ಅನುಶ್ರೀ ವಿಚಾರಣೆಗೆ ಹಾಜರಾಗಿದ್ದಾರೆ. ಅನುಶ್ರೀಯನ್ನು ಪಣಂಬೂರು ಎಸಿಪಿ ಬೆಳ್ಳಿಯಪ್ಪ ನೇತೃತ್ವ ಪಣಂಬೂರು ಸಿಸಿಬಿ ತಂಡ ವಿಚಾರಣೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಸಿಸಿಬಿ ಹಾಗೂ ಎಕಾನಮಿಕ್ ಮತ್ತು ನಾರ್ಕೊಟಿಕ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಡ್ರಗ್ಸ್ ಸೇವನೆ ಮತ್ತು ಮಾರಾಟ ಆರೋಪದಲ್ಲಿ ಕೊರಿಯೋಗ್ರಾಫರ್ ಕಿಶೋರ್ ಅಮನ್ ಮತ್ತು ಅಕೀಲ್ ನೌಶೀಲ್ ನನ್ನು ಬಂಧಿಸಿದ್ದರು. ಅನಂತರ ತರುಣ್ ಎಂಬಾತನನ್ನು ಕೂಡ ವಿಚಾರಣೆ ನಡೆಸಿದ್ದರು. ಈ ಸಂದರ್ಭ ಅನುಶ್ರೀಗೆ ಇವರ ಜತೆ ನಂಟು ಇರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅನುಶ್ರೀಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.