ಉಡುಪಿ: ನಿಂತಿದ್ದ ಕಾರಿಗೆ ರಿಕ್ಷಾ ಢಿಕ್ಕಿ; ಚಾಲಕ ಮೃತ್ಯು
ಉಡುಪಿ, ಅ.20: ರಸ್ತೆ ಬದಿ ನಿಂತಿದ್ದ ಕಾರಿಗೆ ರಿಕ್ಷಾವೊಂದು ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಗುಂಡಿಬೈಲು ನಾಗನಕಟ್ಟೆ ಸಮೀಪ ಅ.20ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಮೂಡಬೆಟ್ಟುವಿನ ಸುನೀಲ್(44) ಎಂದು ಗುರುತಿಸಲಾಗಿದೆ. ಅಂಬಾಗಿಲು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ರಿಕ್ಷಾ, ರಸ್ತೆ ಬದಿ ನಿಂತಿದ್ದ ಕಾರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಿಕ್ಷಾ ಪಲ್ಟಿಯಾಗಿದ್ದು, ಈ ವೇಳೆ ಚಾಲಕ ರಿಕ್ಷಾದಿಂದ ಹೊರಗೆ ಎಸೆಯಲ್ಪಟ್ಟರೆನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಸುನೀಲ್, ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
(ಸುನೀಲ್)
ರಿಕ್ಷಾದಲ್ಲಿ ಇಬ್ಬರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರೆನ್ನಲಾಗಿದೆ. ಸುನೀಲ್ ನಗರ ಮಸೀದಿ ಸಮೀಪದ ರಿಕ್ಷಾ ನಿಲ್ದಾಣದಲ್ಲಿ ಬಾಡಿಗೆ ನಡೆಸುತ್ತಿದ್ದರು. ಈ ಬಗ್ಗೆ ಉಡುಪಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story