ಉಡುಪಿ ಜಿಲ್ಲೆ: ಇಬ್ಬರಿಗೆ ಕೊರೋನ ಸೋಂಕು ದೃಢ
ಉಡುಪಿ, ಜ.14: ಗುರುವಾರ ಜಿಲ್ಲೆಯಲ್ಲಿ ಕೇವಲ ಇಬ್ಬರಲ್ಲಿ ಮಾತ್ರ ಕೋವಿಡ್- 19 ಸೋಂಕು ಕಂಡುಬಂದಿದೆ. ದಿನದಲ್ಲಿ ಮೂವರು ಸೋಂಕಿನಿಂದ ಗುಣಮುಖರಾಗಿದ್ದು, ಸದ್ಯ 52 ಮಂದಿ ಸೋಂಕಿಗೆ ಚಿಕಿತ್ಸೆಯಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದವರಿಬ್ಬರೂ ಪುರುಷರಾಗಿದ್ದು, ಇಬ್ಬರೂ ಕುಂದಾಪುರ ತಾಲೂಕಿನವರಾಗಿದ್ದಾರೆ. ಬುಧವಾರ ಜಿಲ್ಲೆಯ ಮೂವರು ಚಿಕಿತ್ಸೆ ಬಳಿಕ ಕೊರೋನಾದಿಂದ ಮುಕ್ತಿ ಪಡೆದಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಸೋಂಕಿ ನಿಂದ ಮುಕ್ತಿ ಪಡೆದವರ ಒಟ್ಟು ಸಂಖ್ಯೆ ಈಗ 22,964ಕ್ಕೇರಿದೆ ಎಂದರು.
1174 ಮಂದಿ ನೆಗೆಟಿವ್: ಬುಧವಾರ ಜಿಲ್ಲೆಯ ಒಟ್ಟು 1177 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 1174 ಮಂದಿಯ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿದೆ. ಮೂವರಲ್ಲಿ ಮಾತ್ರ (ಐಸಿಎಂಆರ್ ವರದಿ) ಸೋಂಕು ಪತ್ತೆಯಾಗಿದೆ. ಈ ಮೂಲಕ ಇದುವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 23,205 ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 3,18,160 ಮಂದಿ ಕೋವಿಡ್ ಪರೀಕ್ಷೆಗೊಳ ಗಾಗಿದ್ದಾರೆ. ಇವರಲ್ಲಿ 2,94,955 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ. ಒಟ್ಟು 23,205 ಮಂದಿ ಈವರೆಗೆ ಪಾಸಿಟಿವ್ ಬಂದಿದ್ದರೆ, 22,964 ಮಂದಿ ಚೇತರಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ಗೆ ಬಲಿಯಾದವರ ಸಂಖ್ಯೆ 189ರಲ್ಲೇ ಇದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.