ಉಪ್ಪಿನಂಗಡಿ: ಅಕ್ರಮ ಮರಳು ಅಡ್ಡೆಗೆ ದಾಳಿ; ಸೊತ್ತು ವಶ
ಉಪ್ಪಿನಂಗಡಿ: ಪೆರ್ನೆ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಆರೋಪದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಲಾದ ಮರಳನ್ನು ಮುಟ್ಟುಗೋಲು ಹಾಕಿ, ಅಲ್ಲಿ ನಿರ್ಮಿಸಲಾದ ಶೆಡ್ ಅನ್ನು ತೆರವುಗೊಳಿಸಿದ ಘಟನೆ ಇಂದು ನಡೆದಿದೆ.
ಪೆರ್ನೆ ಗ್ರಾಮದ ಕಳೆಂಜ ಎಂಬಲ್ಲಿ ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳು ಸಂಗ್ರಹಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿ ಮಹದೇಶ್ವರ ಮತ್ತು ಅಧಿಕಾರಿಗಳ ತಂಡ ಈ ದಾಳಿ ನಡೆಸಿದ್ದು, ಈ ಸಂದರ್ಭ ಅಕ್ರಮವಾಗಿ ದೋಣಿಯ ಮೂಲಕ ಮರಳು ಸಂಗ್ರಹಿಸಿ ನದಿ ದಡದಲ್ಲಿ ರಾಶಿ ಹಾಕಿರುವುದನ್ನು ಪತ್ತೆ ಹಚ್ಚಿ ಮರಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅಲ್ಲದೆ, ನದಿ ದಡದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್ ಅನ್ನು ತೆರವುಗೊಳಿಸಿದೆ.
ಪೆರ್ನೆ ಗ್ರಾಮದ ಬಿಳಿಯೂರುನಲ್ಲಿ ಮರಳು ತೆಗೆಯಲು ಪರವಾನಿಗೆ ನೀಡಲಾಗಿದೆ. ಆದರೆ ಪೆರ್ನೆಯಲ್ಲಿ ಮರಳು ತೆಗೆಯಲು ಪರವಾನಿಗೆ ನೀಡಿಲ್ಲ. ಆದರೆ ಅಲ್ಲಿ ಹನೀಫ್ ಎಂಬಾತ ಅಕ್ರಮವಾಗಿ ಮರಳು ತೆಗೆದು ದಾಸ್ತಾನು ಇರಿಸಿದ್ದು, ಕಂಡು ಬಂದಿದೆ. ಅಲ್ಲಿ ಮಹಜರು ಮಾಡಿ ಮರಳು ಮುಟ್ಟುಗೋಲು ಮಾಡಿ, ಶೆಡ್ ತೆರವು ಮಾಡಿದ್ದೇವೆ. ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ಹಿರಿಯ ಅಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ಭೂವಿಜ್ಞಾನಿ ಮಹದೇಶ್ವರ ತಿಳಿಸಿದ್ದಾರೆ.