ಉಡುಪಿ: ಶುಕ್ರವಾರ 22 ಮಂದಿಯಲ್ಲಿ ಕೊರೋನ ಸೋಂಕು ಪತ್ತೆ
ಉಡುಪಿ, ಮಾ.5: ಶುಕ್ರವಾರ ಜಿಲ್ಲೆಯಲ್ಲಿ 22 ಮಂದಿ ಕೋವಿಡ್ಗೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ 18 ಮಂದಿ ಸೋಂಕಿನಿಂದ ಗುಣಮುಖ ರಾದರೆ, ಸೋಂಕಿಗೆ ಚಿಕಿತ್ಸೆಯಲ್ಲಿರುವವರ ಸಂಖ್ಯೆಯೂ ಈಗ 77 ಆಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ.
ಇಂದು ಪಾಸಿಟಿವ್ ಬಂದವರಲ್ಲಿ ತಲಾ 11 ಮಂದಿ ಪುರುಷರು ಹಾಗೂ ಮಹಿಳೆಯರು. ಇವರಲ್ಲಿ 11 ಮಂದಿ ಉಡುಪಿ ತಾಲೂಕಿನವರು, ಆರು ಮಂದಿ ಕುಂದಾಪುರ ಹಾಗೂ ಉಳಿದ ಐವರು ಕಾರ್ಕಳ ತಾಲೂಕಿನವರು. ಎಲ್ಲಾ 22 ಮಂದಿ ಸೋಂಕಿತರು ಹೋಮ್ ಐಸೋಲೇಷನ್ನಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಗುರುವಾರ 18 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 23,406ಕ್ಕೇರಿದೆ.
1239 ಮಂದಿ ನೆಗೆಟಿವ್: ಗುರುವಾರ ಜಿಲ್ಲೆಯ 1259 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಇವರಲ್ಲಿ 1239 ಮಂದಿಯ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿದೆ. ಉಳಿದ 20 ಮಂದಿಯಲ್ಲಿ (ಐಸಿಎಂಆರ್ ವರದಿ) ಸೋಂಕು ಪತ್ತೆಯಾಗಿದೆ. ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 23,673 ಆಗಿದೆ ಎಂದು ಡಿಎಚ್ಓ ಡಾ.ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 3,73,814 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ. ಇವರಲ್ಲಿ 3,50,141 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ. ಜಿಲ್ಲೆಯಲ್ಲಿ ಇಂದು ಸಹ ಕೋವಿಡ್ಗೆ ಯಾರೂ ಬಲಿಯಾಗಿಲ್ಲ. ಕೋವಿಡ್ನಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 190 ಆಗಿದೆ.