ಉಡುಪಿ: ಬ್ಯಾಂಕ್ಗಳ ಕೆಲಸದ ಅವಧಿ ಬದಲು
ಬೆಳಗ್ಗೆ 8:00ರಿಂದ ಅಪರಾಹ್ನ 12:00ರವರೆಗೆ ವ್ಯವಹಾರ
ಉಡುಪಿ, ಮೇ 27: ಈಗಿರುವ ಕೋವಿಡ್-19 ನಿರ್ಬಂಧಗಳ ಸಂದರ್ಭ ದಲ್ಲಿ ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೌಲಭ್ಯಗಳು ಅತೀ ಅಗತ್ಯವಾಗಿರುವುದರಿಂದ ಜನರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿರುವ ಬ್ಯಾಂಕ್ಗಳ ಕೆಲಸದ ಅವಧಿಯಲ್ಲಿ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.
ಬದಲಾದ ಈ ಕಾರ್ಯಾವಧಿ ಮೇ 28ರಿಂದ ಜೂ.6ರವರೆಗೆ ಜಾರಿಯಲ್ಲಿರುತ್ತದೆ. ಸರಕಾರದ ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಮೇ 28 (ಶುಕ್ರವಾರದಿಂದ) ಜೂ.6ರವರೆಗೆ ಜಿಲ್ಲೆಯ ಬ್ಯಾಂಕುಗಳ ಬೆಳಗ್ಗೆ 8:00ರಿಂದ ಅಪರಾಹ್ನ 12:00ಗಂಟೆಯವರೆಗೆ ವ್ಯವಹಾರ ನಡೆಸಲಿವೆ. ಬ್ಯಾಂಕಿನ ಕೆಲಸದ ಅವಧಿಯನ್ನು ಬೆಳಗ್ಗೆ 8:00ರಿಂದ ಅಪರಾಹ್ನ 2:00ರವರೆಗೆ ನಿಗದಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಲಾಕ್ಡೌನ್ ಅವಧಿಯಲ್ಲಿ ಬ್ಯಾಂಕ್ಗಳು ಕಾರ್ಯಾಚರಿಸುವ ಅವಧಿಯನ್ನು ಬೆಳಗ್ಗೆ 6:00ರಿಂದ 10:00ರವರೆಗೆ ಬದಲಾಯಿಸುವಂತೆ ಸಾರ್ವಜನಿಕರಿಂದ ಬೇಡಿಕೆಗಳು ಬಂದಿದ್ದವು. ಬ್ಯಾಂಕ್ಗಳ ಕೆಲಸದ ಅವಧಿಯಲ್ಲಿ 8:00ರಿಂದ ಅಪರಾಹ್ನ 2:00ರವರೆಗೆ ನಿಗದಿಪಡಿಸುವಂತೆ ಲೀಡ್ಬ್ಯಾಂಕ್ನ ಜಿಲ್ಲಾ ಮುಖ್ಯಸ್ಥರು ಮನವಿ ಮಾಡಿದ್ದರು.