ಸುನಿಲ್ ಬಜಿಲಕೇರಿಯ ವಿರುದ್ಧ ಯುವತಿ ದೂರು
ಸುನಿಲ್ ಬಜಿಲಕೇರಿ (Photo: Facebook)
ಮಂಗಳೂರು, ಜೂ.10: ದ.ಕ. ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ರೊಂದಿಗೆ ಸ್ಥಳೀಯ ಚಾನೆಲ್ ನಡೆಸಿದ ಸಂದರ್ಶನವನ್ನು ತಿರುಚಿ ಅಪ್ಲೋಡ್ ಮಾಡಿದ್ದಾರೆನ್ನಲಾದ ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿಯ ವಿರುದ್ಧ ಯುವತಿ ಕೂಡ ಬರ್ಕೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಂದರ್ಶನದ ವೇಳೆ ನಳಿನ್ಗೆ ಫೋನ್ ಕರೆ ಮಾಡಿದ ಚಿಕ್ಕಮಗಳೂರಿನ ಯುವತಿ ಸುನಿಲ್ ಬಜಿಲಕೇರಿಯ ವಿರುದ್ಧ ಪ್ರತ್ಯೇಕ ದೂರು ನೀಡಿದ್ದಾರೆ. ಈ ಹಿಂದೆ ಸುನಿಲ್ ಬಜಿಲಕೇರಿ ತನಗೆ ಆ್ಯಸಿಡ್ ಎರಚುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಿರುಚಿದ ಆಡಿಯೋ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ಕೃತ್ಯಕ್ಕೆ ಸಂಬಂಧಿಸಿ ಸುನಿಲ್ ಬಜಿಲಕೇರಿ ಬಳಸಿದ ಮೊಬೈಲ್ನ್ನು ಸೈಬರ್ ಲ್ಯಾಬ್ಗೆ ಕಳುಹಿಸಲಾಗಿದೆ. ವೀಡಿಯೋ ಎಡಿಟ್ ಮಾಡಿರುವುದು, ಅಪ್ಲೋಡ್ ಹಾಗೂ ಫಾರ್ವರ್ಡ್ ಮಾಡಿರುವುದಕ್ಕೆ ಸಂಬಂಧಿಸಿ ಲ್ಯಾಬ್ನಲ್ಲಿ ಪರಿಶೀಲನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಸಂಸದ ನಳಿನ್ ಕುಮಾರ್ ಕಟೀಲ್ರ ಸಂದರ್ಶನದ ವೇಳೆ ಬಿಜೆಪಿ ಕಾರ್ಯಕರ್ತೆಯು ದೂರವಾಣಿ ಕರೆ ಮಾಡಿ ಕಟೀಲ್ರ ಕಾರ್ಯವೈಖರಿಯ ಬಗ್ಗೆ ಪ್ರಶಂಸಿಸಿ ಮಾತನಾಡಿದ್ದಳು. ಅದನ್ನೇ ತಿರುಚಿ ಅಪ್ಲೋಡ್ ಮಾಡಿ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಈ ಬಗ್ಗೆ ಚಾನೆಲ್ನ ಮ್ಯಾನೇಜರ್ ನೀಡಿದ ದೂರಿನಂತೆ ಬರ್ಕೆ ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಕೇಳಿಕೊಂಡಿದ್ದರು.
ಸುನಿಲ್ ಬಜಿಲಕೇರಿಯ ಪೊಲೀಸ್ ಕಸ್ಟಡಿ ಶುಕ್ರವಾರಕ್ಕೆ ಕೊನೆಗೊಳ್ಳಲಿದೆ. ಮತ್ತೆ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.