ಜೆಪ್ಪು; ತುಂಬಿ ಹರಿಯುತ್ತಿದೆ ಮ್ಯಾನ್ಹೋಲ್ : ಮಳೆ ನೀರಿನ ಜತೆ ಮನೆಯಂಗಳಕ್ಕೆ ಡ್ರೈನೇಜ್ ನೀರು !
ಮಂಗಳೂರು, ಜೂ. 14: ಜೆಪ್ಪುವಿನ ಗುಜ್ಜರಕೆರೆ ಬಳಿ ರಸ್ತೆಯಲ್ಲಿ ಮಳೆಯಿಂದ ಮ್ಯಾನ್ಹೋಲ್ (ಡ್ರೈನೇಜ್) ತುಂಬಿ ಹರಿಯುತ್ತಿದ್ದು, ಮಳೆ ನೀರಿನ ಜತೆ ಕೊಳಚೆ ನೀರು ಸಮೀಪದ ಮನೆಯಂಗಳಕ್ಕೆ ಹರಿಯುತ್ತಿದೆ.
ಚರಂಡಿ ತುಂಬಿ ಮಳೆ ನೀರಿನ ರಭಸಕ್ಕೆ ಮ್ಯಾನ್ಹೋಲ್ನ ಮುಚ್ಚಳವೇ ಎದ್ದು ಕಾರಂಜಿಯಂತೆ ಮೇಲಕ್ಕೆ ಪುಟಿದೇಳುತ್ತಿದ್ದು, ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.
ಕಳೆದ ಬಾರಿ ಸುಮಾರು 7 ಲಕ್ಷ ರೂ. ಖರ್ಚು ಮಾಡಿ ಇಲ್ಲಿನ ಚರಂಡಿ ದುರಸ್ತಿ ಮಾಡಿ ಎಲ್ಲವೂ ಸರಿಯಾಗಿದೆ ಎಂದು ಹೇಳಲಾಗಿತ್ತು. ಆದರೆ ಮತ್ತೆ ಸಮಸ್ಯೆ ಕಾಣಿಸಿಕೊಂಡಿದೆ ಎನ್ನುತ್ತಾರೆ ಸ್ಥಳೀಯರು.
ಮಳೆಗಾಲದಲ್ಲಿ ಕಳೆದ ಸುಮಾರು 3 ವರ್ಷಗಳಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಪ್ರತಿ ವರ್ಷ ಶಾಶ್ವತ ಪರಿಹಾರದ ಭರವಸೆ ದೊರೆಯುತ್ತಿ ದೆಯಾದರೂ ಪರಿಹಾರ ಮಾತ್ರ ದೊರಕಿಲ್ಲ. ಸುಮಾರು ನಾಲ್ಕು ಮನೆಗಳ ತುಳಸಿ ಕಟ್ಟೆ ಸೇರಿದಂತೆ ಹಿತ್ತಲಲ್ಲಿ ಡ್ರೈನೇಜ್ ಸೇರಿದೆ. ಸಂಬಂಧಪಟ್ಟ ಎಲ್ಲರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಗುಜ್ಜರಕೆರೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ನೇಮು ಕೊಟ್ಟಾರಿ ತಿಳಿಸಿದ್ದಾರೆ.