ಬಂಟ್ವಾಳ: ಕಾಣೆಯಾಗಿದ್ದ ಯುವಕನ ಮೃತದೇಹ ರೈಲು ಹಳಿಯಲ್ಲಿ ಪತ್ತೆ
ಕಾರ್ತಿಕ್
ಬಂಟ್ವಾಳ, ಜು. 30: ಕಾಣೆಯಾಗಿದ್ದ ಯುವಕನೋರ್ವನ ಮೃತದೇಹ ತಾಲೂಕಿನ ದೇವಂದಬೆಟ್ಟು ಎಂಬಲ್ಲಿನ ರೈಲು ಹಳಿಯಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ತಾಲೂಕಿನ ಕಳ್ಳಿಗೆ ಗ್ರಾಮದ ಲಕ್ಷಣ ಎಂಬವರ ಪುತ್ರ ಕಾರ್ತಿಕ್ (25) ಗುರುವಾರ ಸಂಜೆ ಮನೆಯಿಂದ ಹೊರಟಿದ್ದು, ರಾತ್ರಿ 11 ಗಂಟೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಆತನಿಗಾಗಿ ಹುಡುಕಾಟ ಆರಂಭಿಸಿದ್ದರು.
ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಕಾರ್ತಿಕ್ ನ ಮೃತದೇಹ ದೇವಂದಬೆಟ್ಟು ಎಂಬಲ್ಲಿನ ರೈಲು ಹಳಿಯಲ್ಲಿ ಪತ್ತೆಯಾಗಿದೆ. ರೈಲು ಹರಿದು ಮೃತದೇಹ ಛಿದ್ರವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈಲ್ವೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮೃತ ಯುವಕನ ಕುಟುಂಬಸ್ಥರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.