ತಲಪಾಡಿ ಗಡಿಯಲ್ಲಿ ದ.ಕ. ಜಿಲ್ಲಾಧಿಕಾರಿ, ಕಮಿಷನರ್ ಭೇಟಿ, ಪರಿಶೀಲನೆ
ಕೋವಿಡ್-19 ಸೋಂಕಿನ ಪ್ರಮಾಣ ಹೆಚ್ಚಳ ಹಿನ್ನೆಲೆ
ಮಂಗಳೂರು, ಜು.30: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿರುವ ಮತ್ತು ದ.ಕ.ಜಿಲ್ಲೆಯಲ್ಲೂ ಪಾಸಿಟಿವಿಟಿ ದರವೂ ಅಧಿಕಗೊಳ್ಳುತ್ತಿರುವ ಹಿನ್ನಲೆಯಲ್ಲಿ ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ದ.ಕ.-ಕಾಸರಗೋಡು ಜಿಲ್ಲೆಯ ಗಡಿ ಭಾಗವಾದ ತಲಪಾಡಿ ಚೆಕ್ಪೋಸ್ಟ್ಗೆ ಶುಕ್ರವಾರ ಭೇಟಿ ನೀಡಿ ಕೋವಿಡ್ ತಪಾಸಣೆ ಕುರಿತು ಪರಿಶೀಲಿಸಿದರು. ಅದಲ್ಲದೆ ದೇವಿಪುರ ಗಡಿಭಾಗಕ್ಕೂ ತೆರಳಿ ವಸ್ತುಸ್ಥಿತಿ ಅವಲೋಕಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಕೇರಳದಲ್ಲಿ ಕೋವಿಡ್-19 ಸೋಂಕಿನ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಕಾಸರಗೋಡು ಜಿಲ್ಲೆಯ ಜನರು ನಾನಾ ಕಾರಣಕ್ಕೆ ದ.ಕ.ಜಿಲ್ಲೆಯನ್ನು ಅವಲಂಬಿಸಿದ್ದಾರೆ. ದಿನನಿತ್ಯ ಸಾವಿರಾರು ಮಂದಿ ಬಸ್ಗಳು, ಖಾಸಗಿ ವಾಹನಗಳು, ರೈಲಿನ ಮೂಲಕ ಆಗಮಿಸುತ್ತಿದ್ದಾರೆ. ಮುನ್ನೆಚ್ಚರಿಕೆಯ ಕ್ರಮವಾಗಿ ಗಡಿಭಾಗದಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಸಂಭಾವ್ಯ ಅಪಾಯವನ್ನು ತಪ್ಪಿಸಲು ಶನಿವಾರ ಜನಪ್ರತಿನಿಧಿಗಳ, ಅಧಿಕಾರಿಗಳ ಸಭೆ ನಡೆಸಿ ಸೋಂಕು ಹರಡುವುದನ್ನು ತಡೆಗಟ್ಟಲು ಏನೇನು ಕ್ರಮ ಜರುಗಿಸಬಹುದು ಎಂಬುದರ ಬಗ್ಗೆ ಚರ್ಚಿಸಲಾಗು ವುದು. ಸರಕಾರದ ಮಾರ್ಗದರ್ಶನ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭ ಡಿಸಿಪಿ ಹರಿರಾಂ ಶಂಕರ್, ಮಂಗಳೂರು ಉಪ ವಿಭಾಗಾಧಿಕಾರಿ ಮದನ್ ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್, ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಟಿಎಚ್ಒ ಡಾ. ಸುಜಯ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.