ಭಟ್ಕಳ: ಫೇಸ್ಬುಕ್ನಲ್ಲಿ ಅವಹೇಳನಕಾರಿ ಬರಹ; ಶಾಸಕರ ಆಪ್ತ ಸಹಾಯಕರಿಂದ ದೂರು
ಭಟ್ಕಳ: ಫೇಸ್ಬುಕ್ನಲ್ಲಿ 'ಸುನೀಲ ಅಣ್ಣನ ಅಭಿಮಾನಿ' ಎನ್ನುವ ನಕಲಿ ಖಾತೆಯಲ್ಲಿ ಶಾಸಕ ಸುನೀಲ ನಾಯ್ಕರ ಕುರಿತು ಚಾರಿತ್ರ್ಯಹರಣ ಮಾಡುತ್ತಿದ್ದು, ನಕಲಿ ಖಾತೆಯನ್ನು ತಡೆಹಿಡಿದು ಇದರಲ್ಲಿ ಅವಹೇಳನಕಾರಿಯಾಗಿ ಬರೆಯುತ್ತಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕ ಆಪ್ತ ಸಹಾಯಕ ರಾಘವೇಂದ್ರ ಶಿರಾಲಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನ ಸುನೀಲ ಅಣ್ಣನ ಅಭಿಮಾನಿ ಗ್ರೂಪಿನಲ್ಲಿ ಶಾಸಕ ಸುನೀಲ ನಾಯ್ಕ ಇವರ ಚಾರಿತ್ರ್ಯವನ್ನು ಹರಣ ಮಾಡುವುದು ಮುಂದುವರಿದಿದೆ. ಕ್ಷೇತ್ರದಲ್ಲಿ ಬೇರೆ ಬೇರೆ ಸಮುದಾಯದ ಜನರು ಶಾಂತಿ ಸೌಹಾರ್ದತೆಯ ಸಹಬಾಳ್ವೆ ಮಾಡುತ್ತಿದ್ದು, ಎಲ್ಲಾ ಸಮುದಾಯದವರ ಒಮ್ಮತದಲ್ಲಿ ಪರಿಶ್ರಮಿಸಿ ಶಾಸಕರ ಗೆಲುವಿಗೆ ಕಾರಣವಾದ ಅಂಶವನ್ನು ಸಹಿಸದ ಕೆಲವು ಹಿತಾಸಕ್ತಿಗಳು ಫೇಸ್ಬುಕ್ ನಕಲಿ ಖಾತೆಯನ್ನು ಸೃಷ್ಟಿಸಿಕೊಂಡು ಸಮುದಾಯಗಳ ಮಧ್ಯದಲ್ಲಿ ಸಾಮರಸ್ಯವನ್ನು ಹಾಳುಮಾಡುವ ವಿಷಬೀಜವನ್ನು ಬಿತ್ತುತ್ತಿದ್ದು, ಇದರಿಂದ ಶಾಸಕರ ತೇಜೋವದೆ ನಡೆಸುವ ಮೂಲಕ ಸಮುದಾಯಗಳ ಮಧ್ಯದಲ್ಲಿ ಸೌಹಾರ್ದತೆಯನ್ನು ಕಲಕುವ ಪ್ರಯತ್ನ ನಡೆಸಲಾಗುತ್ತಿದೆ. ಇದರಿಂದ ಸಾರ್ವಜನಿಕ ಕಾರ್ಯಕ್ರಮಗಳಿಗೆ ತೀವ್ರ ತೊಡಕಾಗುತ್ತಿರುವುದರಿಂದ ನಕಲಿ ಫೇಸ್ಬುಕ್ ಖಾತೆಯನ್ನು ತಡೆಹಿಡಿಯುವುದರ ಜೊತೆಗೆ ಅವಹೇಳನಕಾರಿಯಾಗಿ ಬರೆಯುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಲಾಗಿದೆ. ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.