ಮಂಗಳೂರು: ಕಾರು ಶೋರೂಂ ಆವರಣಕ್ಕೆ ನುಗ್ಗಿದ ಕಾಡುಹಂದಿ
ಓರ್ವನಿಗೆ ತಿವಿಯಲು ಯತ್ನ: ವೀಡಿಯೊ ವೈರಲ್
ಮಂಗಳೂರು, ನ.27: ನಗರ ಹೊರವಲಯದ ಪಡೀಲ್ ನಲ್ಲಿರುವ ಕಾರುಗಳ ಶೋರೂಂ ಒಂದರ ಆವರಣದೊಳಗೆ ಕಾಡುಹಂದಿಯೊಂದು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದ್ದು, ಇದರ ದೃಶ್ಯಗಳು ಶೋರೂಂನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಘಟನೆ ಕಳೆದ ಬುಧವಾರ ನಡೆದಿದೆ. ಅಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೋರೂಂ ಆವರಣದೊಳಗೆ ಏಕಾಏಕಿ ಮಿಂಚಿನ ವೇಗದಲ್ಲಿ ನುಗ್ಗಿದ ಕಾಡುಹಂದಿ ಕೆಲವೇ ಕ್ಷಣಗಳಲ್ಲಿ ಅಷ್ಟೇ ವೇಗದಲ್ಲಿ ಹೊರಗಡೆ ಓಡಿದೆ.
ಈ ನಡುವೆ ಕಾಡುಹಂದಿಯನ್ನು ಗಮನಿಸಿ ಅಲ್ಲಿದ್ದವರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಆದರೆ ಕಾಡುಹಂದಿಯನ್ನು ಗಮನಿಸದೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವನನ್ನು ತಿವಿಯಲು ಯತ್ನಿಸಿದರೂ ಅವರು ಕೂದಲೆಳೆ ಅಂತರದಲ್ಲಿ ಅದರ ದಾಳಿಯಿಂದ ತಪ್ಪಿಸಿಕೊಂಡಿರುವುದು ಸಿಸಿಟಿವಿ ವೀಡಿಯೋದಲ್ಲಿ ಸೆರೆಯಾಗಿದೆ.
Next Story