10ಕ್ಕೆ ಮಲ್ಪೆಯಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ
ಉಡುಪಿ, ಡಿ.7: ಮಲ್ಪೆಯ ಹಾರ್ಡ್ಕೋರ್ ಹೆಲ್ತ್ ಎಂಡ್ ಫಿಟ್ನೆಸ್ ಜಿಮ್, ಉಡುಪಿ ಜಿಲ್ಲಾ ದೇಹದಾರ್ಢ್ಯಪಟುಗಳ ಸಂಘದ ಸಹಯೋಗದೊಂದಿಗೆ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ಡಿ.10ರಂದು ಸಂಜೆ 5:30ಕ್ಕೆ ಮಲ್ಪೆ-ವಡಭಾಂಡೇಶ್ವರ ಗಾಂಧಿ ಶತಾಬ್ಧಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದೆ. ಒಟ್ಟು 8 ದೇಹತೂಕದ ವಿಭಾಗಗಳಲ್ಲಿ ನಡೆಯಲಿರುವ ಈ ಸ್ಪರ್ಧೆಯ ವಿಜೇತ ದೇಹದಾರ್ಢ್ಯಪಟು ಪ್ರಶಸ್ತಿ ಫಲಕದೊಂದಿಗೆ 33,333ರೂ.ನಗದು ಪುರಸ್ಕಾರ ಪಡೆಯಲಿದ್ದಾರೆ. ರನ್ನರ್ಅಪ್ 22,000ರೂ. ಹಾಗೂ ಬೆಸ್ಟ್ ಪೋಸರ್ 12,000 ರೂ. ನಗದು ಗೆಲ್ಲಲಿದ್ದಾರೆ. ಪ್ರತಿವಿಭಾಗದಲ್ಲಿ ಮೊದಲ ನಾಲ್ಕು ಸ್ಥಾನ ಪಡೆಯುವವರು ಕ್ರಮವಾಗಿ 8,000, 7,000, 6,000, 5,000 4,000 ರೂ. ನಗದು ಬಹುಮಾನ ಪಡೆಯಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ‘ಮಿ.ಇಂಡಿಯಾ’ ಪ್ರಶಸ್ತಿ ವಿಜೇತ ಜಿಲ್ಲೆಯ ಹಿರಿಯ ರಾಷ್ಟ್ರೀಯ ದೇಹದಾರ್ಢ್ಯಪಟು ಗೋವರ್ಧನ ಎನ್. ಬಂಗೇರ ಮತ್ತು ಅಂತಾರಾಷ್ಟ್ರೀಯ ಕರಾಟೆ ಪಟು ಪ್ರಭಾಕರ ಕುಂದರ್ರನ್ನು ಸನ್ಮಾನಿಸಲಾಗುವುದು ಎಂದು ಸಂಘಟಕರ ಪ್ರಕಟನೆಯಲ್ಲಿತಿಳಿಸಿದೆ.