ಡಿಜಿಟಲ್ ಪಾವತಿಯತ್ತ ಗಮನ ಹರಿಸಿ: ಸಚಿವೆ ನಿರ್ಮಲಾ
‘ರೇಡಿಯೊ ಪಾಂಚಜನ್ಯ’ ಬಾನುಲಿ ಕೇಂದ್ರ ಉದ್ಘಾಟನೆ
ಪುತ್ತೂರು, ಜ.12: ದೇಶದಲ್ಲಿ ಸಾಕ್ಷರತೆ, ತಂತ್ರಜ್ಞಾನಗಳು ಸಾಕಷ್ಟು ಮುಂದುವರಿದಿದ್ದರೂ ಶೇ.90 ಮಂದಿ ನಗದು ರೂಪದಲ್ಲೇ ವ್ಯವಹಾರ ನಡೆಸುತ್ತಿದ್ದಾರೆ. ಯುವ ಸಮೂಹ ಡಿಜಿಟಲ್ ಪಾವತಿಯತ್ತ ಗಮನ ಹರಿಸಬೇಕಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಹಣಕಾಸು ಖಾತೆಯ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಗುರುವಾರ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಆಯೋಜಿಸಲಾದ ರೇಡಿಯೊ ಪಾಂಚಜನ್ಯ ಬಾನುಲಿ ಕೇಂದ್ರ ಹಾಗೂ ವಿವೇಕಾನಂದ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾತೃ ಭಾಷೆಯಲ್ಲಿನ ಸೊಗಡನ್ನು ಜಗತ್ತಿನ ಇತರ ಯಾವ ಭಾಷೆಯಿಂದಲೂ ನೀಡಲು ಅಸಾಧ್ಯ. ರೇಡಿಯೊ ಪಾಂಚಜನ್ಯ ಸ್ಥಳೀಯ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದರು.
ಆರೆಸ್ಸೆಸ್ ಕರ್ನಾಟಕ ದಕ್ಷಿಣ ಪ್ರಾಂತ ಸಹಪ್ರಚಾರ ಪ್ರಮುಖ್ ಪ್ರದೀಪ್ ದಿಕ್ಸೂಚಿ ಭಾಷಣ ಮಾಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಈ ಸಂದಭರ್ ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯೀಕರಣದ ಬಗ್ಗೆ ಮಾತನಾಡಿದ ವಿಚಾರಗಳ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು ಮತ್ತು ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಸಂಸದ ನಳಿನ್ಕುಮಾರ್ ಕಟೀಲ್, ವಿವೇಕಾನಂದ ಕಾಲೇಜಿನ ಸ್ಥಾಪಕ ಸಮಚಾಲಕ ಕೆ.ರಾಮ ಭಟ್ ಉರಿಮಜಲು, ರೇಡಿಯೊ ಪಾಂಚಜನ್ಯ ಸಮಿತಿಯ ಕಾರ್ಯದರ್ಶಿ ಶ್ರೀಕಾಂತ ಕೊಳತ್ತಾಯ, ಸದಸ್ಯ ಬಿ.ಟಿ.ರಂಜನ್ ಮತ್ತಿತರರು ಉಪಸ್ಥಿತರಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರೇಡಿಯೊ ಪಾಂಚಜನ್ಯ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಕುಂಟಿನಿ ವಂದಿಸಿದರು. ಉಪನ್ಯಾಸಕಿ ವಿಜಯಾ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು.