ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮಾನ ತೆಗೆದ ಶೋಭಾ: ಯು.ಟಿ. ಖಾದರ್

ಮಂಗಳೂರು, ಜು. 19: ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಸಚಿವ ರಾಜ್‌ನಾಥ್ ಸಿಂಗ್‌ಗೆ ಬರೆದ ಪತ್ರದಲ್ಲಿ 'ಕೊಲೆಗೀಡಾದ 23 ಮಂದಿಯಲ್ಲಿ’ ಮೂಡಬಿದ್ರೆಯ ಅಶೋಕ್ ಪೂಜಾರಿ ಎಂಬ ವ್ಯಕ್ತಿಯ ಹೆಸರು ಉಲ್ಲೇಖ ಮಾಡಲಾಗಿದೆ. ಆದರೆ, ಅಶೋಕ್ ಪೂಜಾರಿ ಇನ್ನೂ ಬದುಕಿದ್ದು, ಈ ಬಗ್ಗೆ ಶೋಭಾ ಅವರ ಪತ್ರಕ್ಕೆ ಸಚಿವ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದಾರೆ.
ಇದು ಪೊಲಿಟಿಕಲ್ ಗಿಮಿಕ್ ಅನ್ನೋದು ಗೊತ್ತಾಗುತ್ತದೆ. ಸತ್ತವರನ್ನು ಬದುಕಿಸುತ್ತಾರೆ ಮತ್ತು ಬದುಕಿದವರನ್ನು ಪತ್ರದಲ್ಲೇ ಸಾಯಿಸುತ್ತಾರೆ, ಓಟಿಗಾಗಿ ಮಾಡುತ್ತಿರುವ ಕೆಲಸ ಎಂದಿದ್ದು, ಸಂಸದರ ಹಲವು ಹೇಳಿಕೆಗಳಿಂದ ಈವರೆಗೆ ರಾಜ್ಯ ಮಟ್ಟದಲ್ಲಿ ಮಾನ ಹೋಗಿತ್ತು. ಈಗ ತಪ್ಪು ಪತ್ರ ಬರೆದು ರಾಷ್ಟ್ರ ಮಟ್ಟದಲ್ಲಿ ಮಾನ ಹೋಗಿದೆ ಎಂದು ಸಚಿವ ಖಾದರ್ ತಿಳಿಸಿದರು.
ವಿನಾಯಕ ಬಳಿಗಾ, ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿ ಅವರನ್ನು ಕೊಲೆ ಮಾಡಲಾಗಿದೆ. ಆದರೆ ಶೋಭಾ ಅವರು ಬರೆದ ಪತ್ರದಲ್ಲಿ ಇವರ ಹೆಸರು ಸೇರಿಸಿಲ್ಲ. ಯಾಕೆ ಅವರು ದಕ್ಷಿಣ ಕನ್ನಡದವರು ಅಲ್ಲವೇ ? ಎಂದು ಪ್ರಶ್ನಿಸಿದ ಸಚಿವ ಖಾದರ್ ಈ ಪತ್ರ ನೋಡಿದರೆ ಅವರ ಮನಸ್ಥಿತಿ ಏನು ಎಂಬುದು ತಿಳಿಯುತ್ತದೆ ಎಂದು ಸಚಿವ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದಾರೆ.





