ತುಮಕೂರು: ಕಾಂಗ್ರೆಸ್ ಮುಖಂಡನ ನಿವಾಸದ ಮೇಲೆ ಐಟಿ ದಾಳಿ
ರವಿಕುಮಾರ್
ತುಮಕೂರು, ಫೆ.4: ಕಾಂಗ್ರೆಸ್ ಮುಖಂಡ, ಕ್ಲಾಸ್ ವನ್ ಗುತ್ತಿಗೆದಾರ ರಾಯಸಂದ್ರ ರವಿಕುಮಾರ್ ಅವರ ನಿವಾಸದ ಮೇಲೆ ಸೋಮವಾರ ಸಂಜೆ ಐಟಿ ದಾಳಿ ನಡೆದಿದೆ.
ಡಿ.ಟಿ ನಗರದ ಎಸ್.ಐ.ಟಿ. ಪ್ರದೇಶದಲ್ಲಿರುವ ರವಿಕುಮಾರ್ ಅವರ ಮನೆಗೆ 15 ಅಧಿಕಾರಿಗಳನ್ನು ಒಳಗೊಂಡ ಐಟಿ ತಂಡ ಸೋಮವಾರ ಸಂಜೆ ದಾಳಿ ನಡೆಸಿದೆ. ತಡರಾತ್ರಿಯವರೆಗೂ ಶೋಧ ಕಾರ್ಯ ನಡೆಸಿದ ಅಧಿಕಾರಿಗಳು ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ತುರುವೇಕೆರೆಯ ರಾಯಸಂದ್ರದಲ್ಲಿರುವ ರವಿಕುಮಾರ್ ಅವರ ಮನೆ ಹಾಗೂ ಅವರ ಸಹೋದರಿಯ ನಿವಾಸದ ಮೇಲೂ ಏಕಕಾಲಕ್ಕೆ ಐಟಿ ದಾಳಿ ನಡೆದಿದೆ.
ಈ ಹಿಂದೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ರವಿಕುಮಾರ್ 2008ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು. ಕೃಷಿಕ ಮತ್ತು ಗುತ್ತಿಗೆದಾರರಾಗಿರುವ ರವಿಕುಮಾರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು. ಇವರು ತುಮಕೂರಿನ ಮಾಜಿ ಸಂಸದ ಮುದ್ದಹನುಮೇನಗೌಡ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದಾರೆ.
Next Story