ಮಹಾರಾಷ್ಟ್ರದಲ್ಲಿ ಭಾರೀ ಮಳೆ: ಉ.ಕ. ಭಾಗದ ಹಲವು ಗ್ರಾಮಗಳು ಜಲಾವೃತ, ಜನಜೀವನ ಅಸ್ತವ್ಯಸ್ತ
ಕೋಯ್ನಾ, ಕೃಷ್ಣಾ, ಮಲಪ್ರಭಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ
ಬೆಂಗಳೂರು, ಆ. 17: ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ನಾಲ್ಕೈದು ದಿನಗಳಿಂದ ಸತತವಾಗಿ ಮಳೆಯ ಅಬ್ಬರದ ಹಿನ್ನೆಲೆಯಲ್ಲಿ ಅಲ್ಲಿನ ಎಲ್ಲ ಜಲಾಶಯಗಳು ಭರ್ತಿಯಾಗಿದ್ದು, ಕೋಯ್ನಾ ಸೇರಿ ವಿವಿಧ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿರುವುದರಿಂದ ಹೆಚ್ಚಿನ ನೀರು ಹರಿಯಬಿಡುತ್ತಿರುವುದರಿಂದ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ನಾಲ್ಕೈದು ಜಿಲ್ಲೆಗಳ ಹಲವು ಗ್ರಾಮಗಳು ಜಲಾವೃತವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಿಲ್ಲೆಯ ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಾಗಿದ್ದು, ಇದರಿಂದ ಚಿಕ್ಕೋಡಿ ತಾಲೂಕಿನ ಕುಡಚಿ ಸೇತುವೆ ಜಲಾವೃತಗೊಂಡಿದೆ. ಮಳೆಯ ಅರ್ಭಟ ಇನ್ನೂ ಮುಂದೆವರಿದರೆ ಕೃಷ್ಣಾ ನದಿ ನೀರಿನ ಮಟ್ಟ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದರಿಂದ ನದಿ ಪ್ರಾತ್ತದ ಜನರು ಆತಂಕದಲ್ಲಿ ಬದುಕುದೂಡುತ್ತಿದ್ದಾರೆ.
ಜಿಲ್ಲೆಯ ಖಾನಾಪುರ ತಾಲೂಕಿನ ನವೀಲು ತೀರ್ಥ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ನದಿಪಾತ್ರ ಜನರು ಆತಂಕದಲ್ಲಿದ್ದಾರೆ. ರಾಮದುರ್ಗ ತಾಲೂಕಿನ ಸುನ್ನಾಳ ಗ್ರಾಮದಲ್ಲಿ ಮಲಪ್ರಭಾ ನದಿ ನೀರು ನುಗ್ಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಈಗಾಗಲೇ ಸೂಚನೆ ನೀಡಿದೆ.