ಸಾಲದ ಬಾಧೆ: ರೈತ ಆತ್ಮಹತ್ಯೆ
ಕೊಪ್ಪಳ, ಆ.28: ಸಾಲದ ಬಾಧೆಯಿಂದಾಗಿ ರೈತರೊಬ್ಬರು ತನ್ನದೇ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಕುಷ್ಟಗಿ ಪಟ್ಟಣದ ಹಳೆ ಬಜಾರ್ ನಿವಾಸಿ ಉಮೇಶ ಗುರುಸಿದ್ದಯ್ಯ ಸರಗಣಾಚಾರ(45) ಆತ್ಮಹತ್ಯೆಗೆ ಶರಣಾಗಿರುವ ರೈತ ಎಂದು ತಿಳಿದುಬಂದಿದೆ.
15 ಎಕರೆ ಎರೆ ಭೂಮಿ, 4 ಎಕರೆ ಮಸಾರಿ ಜಮೀನು ಹೊಂದಿದ್ದ ಇವರು, ಬಾಗಲಕೋಟೆ ಜಿಲ್ಲೆ ಕಮತಗಿ ಶಾಖೆಯ ಲಕ್ಷ್ಮೀ ಸಹಕಾರ ಬ್ಯಾಂಕಿನಲ್ಲಿ 25 ಲಕ್ಷ ರೂ ಸಾಲ ಪಡೆದಿದ್ದರು. ಸಾಲದ ಹೊರೆ ತೀರಿಸಲಾಗದೇ ಉಮೇಶ ಕಳೆದ ಗುರುವಾರ ಮಧ್ಯಾಹ್ನ ಮನೆಯಿಂದ ಸಿಂಧನೂರು ರಸ್ತೆಯ ಎರೆಹಳ್ಳದ ಜಮೀನಿಗೆ ತೆರಳಿ ವಿಷ ಸೇವಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಎಂದಿನಂತೆ ಮನೆಗೆ ಉಮೇಶ ಬಾರದಿದ್ದಾಗ ಕುಟುಂಬದವರು ಗಾಬರಿಗೊಂಡು ಹೊಲಕ್ಕೆ ಹೋಗಿ ನೋಡಿದಾಗ ಉಮೇಶ ಶವವಾಗಿ ಪತ್ತೆಯಾಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಸಂಬಂಧ ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story