ಪ್ರವಾಹ ಸಂತ್ರಸ್ತರಿಂದ ದೂರು: ಪಿಡಿಒ, ಗ್ರಾಮ ಲೆಕ್ಕಾಧಿಕಾರಿಯನ್ನು ಅಮಾನತುಗೊಳಿಸಿದ ಜಿಲ್ಲಾಧಿಕಾರಿ
ಕಲಬುರಗಿ, ಅ.19: ಅಫಜಲಪುರ ತಾಲೂಕಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಸಂತ್ರಸ್ತರಿಗಾಗಿ ದೇವಲಗಾಣಗಾಪುರದ ಯಾತ್ರಿ ನಿವಾಸದಲ್ಲಿ ಕಾಳಜಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಆದರೆ, ಈ ಕೇಂದ್ರದಲ್ಲಿ ಸರಿಯಾದ ಊಟದ ವ್ಯವಸ್ಥೆಯನ್ನು ಮಾಡದ ಹಿನ್ನೆಲೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುರುನಾಥ ಹರಿದಾಸ ಹಾಗೂ ಗ್ರಾಮ ಲೆಕ್ಕಾಧಿಕಾರಿ ಭಾಗ್ಯಶ್ರೀ ಎಳವಾರ ಅವರನ್ನು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅಮಾನತುಗೊಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದಾಗ ಸಂತ್ರಸ್ತರು ಅಲ್ಲಿಯ ಅವ್ಯವಸ್ಥೆ ಬಗ್ಗೆ ದೂರು ನೀಡಿದರು. ಸರಿಯಾಗಿ ಊಟ ಹಾಕುವುದಿಲ್ಲ, ಅನ್ನದಲ್ಲಿ ಬಹಳ ಹುಳ ಇರುತ್ತವೆ, ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲ ಎಂದು ಆರೋಪಿಸಿದರು.
ಈ ಬಗ್ಗೆ ಕಾಳಜಿ ಕೇಂದ್ರದ ಪ್ರತಿ ವಿಭಾಗಕ್ಕೂ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
Next Story