ಯುಪಿಎಸ್ಸಿ-ಕೆಪಿಎಸ್ಸಿ ಪರೀಕ್ಷೆಗಳ ಗೊಂದಲ: ದಿನಾಂಕ ಬದಲಿಸಲು ಆಗ್ರಹ
ಬೆಂಗಳೂರು, ನ. 15: ಭಾರತೀಯ ಕಂಪನಿ ಕಾರ್ಯದರ್ಶಿ ಸಂಸ್ಥೆಯು ಕಂಪನಿ ಕಾರ್ಯದರ್ಶಿ ಹುದ್ದೆಗಳಿಗೆ ಡಿ.21ರಿಂದ 24ರ ವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿದ್ದು, ಅದೇ ಸಂದರ್ಭದಲ್ಲಿ ಲೆಕ್ಕ ಪರಿಶೋಧನೆ ಇಲಾಖೆಯ ಸಹಾಯಕ ನಿಯಂತ್ರಕ ಹುದ್ದೆಗಳಿಗೆ ಕೆಪಿಎಸ್ಸಿ ಪರೀಕ್ಷೆ ನಡೆಸಲು ಮುಂದಾಗಿರುವುದರಿಂದ ಅಭ್ಯರ್ಥಿಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಅದರ ಜತೆಗೆ, ಕೇಂದ್ರ ನಾಗರಿಕ ಸೇವೆಗಳ ಹುದ್ದೆಗಳ ಆಯ್ಕೆಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಜ. 8ರಿಂದ ಮುಖ್ಯ ಪರೀಕ್ಷೆ ನಿಗದಿಪಡಿಸಿರುವ ಮಧ್ಯೆಯೇ ಗೆಜೆಟೆಡ್ ಪ್ರೊಬೇಷನರಿ 106 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಜ.2 ರಿಂದ ಐದು ದಿನ ಪರೀಕ್ಷೆಗಳನ್ನು ನಡೆಸಲು ಈಗಾಗಲೇ ವೇಳಾಪಟ್ಟಿ ಬಿಡುಗಡೆ ಮಾಡಿರುವುದು ಮತ್ತೊಂದು ಗೊಂದಲಕ್ಕೆ ಕಾರಣವಾಗಿದೆ.
ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ಎಸ್ಸಿ) ಡಿ. 21ರಿಂದ ಡಿ. 31ರವರೆಗೆ ಸ್ಟೆನೋಗ್ರಾಫರ್ ಹುದ್ದೆಗಳಿಗೆ (ಸಿ ಅಂಡ್ ಡಿ ಶ್ರೇಣಿ) ಪರೀಕ್ಷೆ ನಡೆಸಲು ಮುಂದಾಗಿದೆ. ಹೀಗಾಗಿ, ಪರೀಕ್ಷೆಗಳು ಕೈತಪ್ಪುವ ಆತಂಕ ಅಭ್ಯರ್ಥಿಗಳಿಗೆ ಎದುರಾಗಿದೆ.
ಕೆಪಿಎಸ್ಸಿ ದಿನಾಂಕ ಬದಲಿಸಲು ಆಗ್ರಹ: ಕೇಂದ್ರ ನಾಗರಿಕ ಸೇವೆಗಳ ಹುದ್ದೆಗಳ ಆಯ್ಕೆಗೆ ಯುಪಿಎಸ್ಸಿ ಪರೀಕ್ಷೆ ದಿನವನ್ನು ಮೊದಲೇ ನಿಗದಿಪಡಿಸಿದೆ. ಅದು ತಿಳಿದಿದ್ದರೂ ಜನವರಿ ಮೊದಲ ವಾರದಲ್ಲಿ ಕೆಪಿಎಸ್ಸಿ ಪರೀಕ್ಷೆ ನಿಗದಿಪಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅಭ್ಯರ್ಥಿಗಳು, ಕೆಪಿಎಸ್ಸಿ ಪರೀಕ್ಷಾ ವೇಳಾಪಟ್ಟಿ ಬದಲಿಸಬೇಕು ಎಂದು ಒತ್ತಾಯ ಕೇಳಿಬಂದಿದೆ.
ಕೆಪಿಎಸ್ಸಿಯ ಮುಖ್ಯ ಪರೀಕ್ಷೆ ಜ. 5ರಂದು ಆರಂಂಭಗೊಂಡು ನಾಲ್ಕು ದಿನ ನಡೆಯಲಿದೆ. ಕೇವಲ ಮೂರು ದಿನಗಳ ಅಂತರದಲ್ಲಿ ಯುಪಿಎಸ್ಸಿ ಮುಖ್ಯ ಪರೀಕ್ಷೆ ಆರಂಭವಾಗುತ್ತದೆ. ಕೆಪಿಎಸ್ಸಿ ವೇಳಾಪಟ್ಟಿ ಪ್ರಕಟಿಸಿರುವುದು ಅನುಮಾನಗಳಿಗೆ ಕಾರಣವಾಗುತ್ತದೆ ಎಂದು ಪರೀಕ್ಷಾರ್ಥಿಗಳು ಅಪಾದಿಸಿದ್ದಾರೆ.