ಡ್ರಗ್ಸ್ ಪ್ರಕರಣ: ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಜ.19ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್
ಬೆಂಗಳೂರು, ಜ.12: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ದ್ವಿವೇದಿ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜ.19ಕ್ಕೆ ಮುಂದೂಡಿದೆ.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೋಹಿಂಟನ್ ಎಫ್. ನಾರಿಮನ್ ಅವರಿದ್ದ ನ್ಯಾಯಪೀಠ, ಜಾಮೀನು ಅರ್ಜಿ ವಿಚಾರಣೆಯನ್ನು ಜ.19ಕ್ಕೆ ಮುಂದೂಡಿತು. ರಾಗಿಣಿ ದ್ವಿವೇದಿ ಪರವಾಗಿ ಸಿದ್ದಾರ್ಥ ಲೂಥ್ರಾ ಅವರು ವಾದಿಸಿದರು.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 2020ರ ಸೆ.4ರಂದು ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಎನ್ಡಿಪಿಎಸ್ ಮತ್ತು ಐಪಿಸಿ ಕಾಯಿದೆಗಳಡಿಯಲ್ಲಿ ರಾಗಿಣಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಸದ್ಯ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ರಾಗಿಣಿ, ವಿಚಾರಣಾ ನ್ಯಾಯಾಲಯ, ಹೈಕೋರ್ಟ್ ನಲ್ಲಿ ಜಾಮೀನು ಸಿಗದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಕಳೆದ ಮೂರು ತಿಂಗಳಿನಿಂದ ರಾಗಿಣಿ ಜೈಲು ವಾಸ ಅನುಭವಿಸುತ್ತಿದ್ದಾರೆ. ಸದ್ಯ ಸುಪ್ರೀಂಕೋರ್ಟ್ ನಲ್ಲೂ ಅವರಿಗೆ ನಿರಾಸೆ ಆಗಿದೆ. ಡ್ರಗ್ಸ್ ಜಾಲದ ಜೊತೆಗೆ ನಂಟು ಹೊಂದಿದ್ದಾರೆ ಎಂಬ ಆರೋಪದ ಮೇಲೆ ಸೆ.4ರಂದು ಅವರ ಮನೆ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ನಂತರ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.
ರಾಗಿಣಿ ವಿರುದ್ಧ ಎನ್ಡಿಪಿಎಸ್ ಆಕ್ಟ್ 27ಎ ಅಡಿ ಪ್ರಕರಣ ದಾಖಲಾಗಿದ್ದು, ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಸರಕಾರಿ ವಕೀಲರು ವಾದ ಮಂಡಿಸಿದ್ದರು.