ಬೆಂಗಳೂರು: ಹಿಟ್ ಆ್ಯಂಡ್ ರನ್ ಪ್ರಕರಣ; ಪರಾರಿಯಾದ ಕಾರು ಪ್ರಸಿದ್ಧ ಬಾಲಿವುಡ್ ನಟಿಯ ಪತಿಯದ್ದು !
ಬೆಂಗಳೂರು, ಫೆ.12: ಇತ್ತೀಚಿಗೆ ನಡೆದ ಅಪಘಾತವೊಂದರ ಪ್ರಕರಣ ಸಂಬಂಧ ಇಲ್ಲಿನ ಕಬ್ಬನ್ಪಾರ್ಕ್ ಠಾಣಾ ಪೊಲೀಸರು ತನಿಖೆ ನಡೆಸಿದಾಗ, ಅಪಘಾತಕ್ಕೊಳಗಾದ ಕಾರು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿಗೆ ಸೇರಿದ್ದು ಎಂದು ತಿಳಿದುಬಂದಿದೆ.
ಕಬ್ಬನ್ಪಾರ್ಕ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಿಂತಿದ್ದ ಆಟೊ ಹಾಗೂ ಸ್ಕೂಟರ್ ಗೆ ದುಬಾರಿ ಕಾರೊಂದು ಢಿಕ್ಕಿ ಹೊಡೆದು ಪರಾರಿಯಾಗಿದ್ದ ಆರೋಪ ಸಂಬಂಧ ಚಾಲಕ ಮುಹಮ್ಮದ್ ಸದ್ದಾಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಫೆ.7ರಂದು ಏರ್ಲೈನ್ಸ್ ಹೋಟೆಲ್ ಬಳಿ ನಿಂತಿದ್ದ ಆಟೊ ಹಾಗೂ ಸ್ಕೂಟರ್ ಗೆ ಹಿಂಬದಿಯಿಂದ ಬಂದ ಕಾರು ಢಿಕ್ಕಿಯಾಗಿತ್ತು. ಈ ಬಗ್ಗೆ ಸ್ಥಳೀಯರು ಪ್ರಶ್ನಿಸಿದರೂ, ಕಾರು ನಿಲ್ಲಿಸದೆ ಪರಾರಿಯಾಗಿದೆ ಎನ್ನಲಾಗಿದ್ದು, ಅಪಘಾತದಲ್ಲಿ ಆಟೊ ಹಾಗೂ ಸ್ಕೂಟರ್ ಜಖಂ ಆಗಿದ್ದವು.
ಸ್ಥಳಕ್ಕೆ ಧಾವಿಸಿದ ಕಬ್ಬನ್ಪಾರ್ಕ್ ಸಂಚಾರ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದರು. ಅಪಘಾತ ಸ್ಥಳ ಮತ್ತು ಸುತ್ತಲಿನ ಪ್ರದೇಶದಲ್ಲಿದ್ದ ಸಿಸಿ ಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿ ಬಳಿಕ ಕಾರಿನ ನೋಂದಣಿ ಫಲಕ ಆಧರಿಸಿ ಆರೋಪಿಯನ್ನು ಬಂಧಿಸಿದರು. ಕಾರಿನ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಕಾರು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ಕುಂದ್ರಾಗೆ ಸೇರಿದ್ದು ಎಂದು ತಿಳಿದುಬಂದಿದೆ.
ನಾಲ್ಕು ತಿಂಗಳ ಹಿಂದೆ ಬೆಂಗಳೂರು ಮೂಲದ ಕಾರ್ ಡೀಲರ್ ಗೆ ಮುಂಬೈ ಕಾರ್ ಡೀಲರ್ ಮೂಲಕ ರಾಜ್ಕುಂದ್ರಾ ತಮ್ಮ ಕಾರನ್ನು ಮಾರಿದ್ದರು. ಆದರೆ ಮಾರಾಟವಾಗಿ 4 ತಿಂಗಳಾದರೂ ಕಾರಿನ ದಾಖಲೆಗಳು ರಾಜ್ಕುಂದ್ರಾ ಹೆಸರಿನಲ್ಲೇ ಇರುವುದು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.