ಪಿಎಂ ಕಿಸಾನ್ ಯೋಜನೆ: ಕರ್ನಾಟಕ ರಾಜ್ಯ ಮೊದಲ ಸ್ಥಾನ
ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಗೆ ಹೊಸದಿಲ್ಲಿಯಲ್ಲಿ ಸನ್ಮಾನ
Photo: twitter.com/bcpatilkourava
ಬೆಂಗಳೂರು, ಫೆ. 24: ‘ಪಿ.ಎಂ.ಕಿಸಾನ್ ಯೋಜನೆಯಡಿ ಶೇ.97ರಷ್ಟು ಆಧಾರ್ ಕಾರ್ಡ್, ರೈತರ ಬ್ಯಾಂಕ್ ಖಾತೆ ಜೋಡಣೆಯಾಗಿದಕ್ಕೆ ಆರ್ಟಿಜಿಎಸ್ ಆಧಾರಿತ ನೇರ ಹಣ ಪಾವತಿಯಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನ ಪಡೆದಿದೆ' ಎಂದು ಕೃಷಿ ಇಲಾಖೆ ತಿಳಿಸಿದೆ.
ಪಿಎಂ ಕಿಸಾನ್ ಯೋಜನೆಯಡಿ ಕರ್ನಾಟಕ ಸ್ಥಾನ ಮೊದಲ ಸ್ಥಾನ ಪಡೆದಿದ್ದಕ್ಕಾಗಿ ಕೇಂದ್ರ ಸರಕಾರ ಕರ್ನಾಟಕದ ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಅವರನ್ನು ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಿದೆ.
ಇತ್ತೀಚೆಗೆ ಕರ್ನಾಟಕದಲ್ಲಿ ಮೊಬೈಲ್ ಬೆಳೆ ಸಮೀಕ್ಷೆಯೂ ಯಶಸ್ವಿಯಾಗಿದ್ದು, ಕೇಂದ್ರದಿಂದ ಮೆಚ್ಚುಗೆಯನ್ನು ಪಡೆದಿದೆ. ಅಲ್ಲದೆ ಇತರೆ ರಾಜ್ಯಗಳಿಗೂ ಮಾದರಿಯಾಗಿದೆ. ಕೃಷಿಸಂಜೀವಿನಿ ಯೋಜನೆಯೂ ಶ್ಲಾಘನೆ ಪಡೆದಿದ್ದು, ಕರ್ನಾಟಕದ ಕೃಷಿ ಇಲಾಖೆಯಲ್ಲಿ ತಂತ್ರಜ್ಞಾನ ಅಳವಡಿಕೆ ಹಾಗೂ ರೈತರಿಗೆ ಹೊಸಯೋಜನೆಗಳನ್ನು ಪರಿಚಯಿಸುತ್ತಿರುವುದಕ್ಕೆ ಬಿ.ಸಿ.ಪಾಟೀಲರನ್ನು ಕೇಂದ್ರ ಸರಕಾರ ಶ್ಲಾಘಿಸಿದೆ.
‘ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ ಯೋಜನೆಯಡಿಯಲ್ಲಿ ರಾಜ್ಯವು ಅತಿಹೆಚ್ಚು ಶೇಕಡ ಪ್ರಮಾಣದಲ್ಲಿ ಆಧಾರ್ ಕಾರ್ಡ್ ಜೋಡಣೆ ಆಧಾರಿತ ಮೂಲಕ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಅನುಷ್ಠಾನಗೊಳಿಸಿರುವುದಕ್ಕೆ ರಾಜ್ಯವು ಈ ಪ್ರಶಸ್ತಿಗೆ ಭಾಜನವಾಗಿದೆ ಎಂದು ತಿಳಿಸಲಾಗಿದೆ.
ಹೊಸದಿಲ್ಲಿಯ ‘ಪೂಸಾ’ದಲ್ಲಿ ನಡೆದ ಪಿ.ಎಂ.ಕಿಸಾನ್ ಯೋಜನೆಯ 2ನೆ ವರ್ಷದ ವರ್ಷಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಇಲಾಖಾ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಯೋಜನೆಯಡಿ ರಾಜ್ಯವು ಶೇ.97ರಷ್ಟು ‘ಆಧಾರ್’ ದೃಢೀಕರಿಸಿದ ದತ್ತಾಂಶವನ್ನು ಹೊಂದಿದ್ದು, ರಾಜ್ಯದ ಶೇ.90ಕ್ಕೂ ಹೆಚ್ಚು ಫಲಾನುಭವಿಗಳಿಗೆ ‘ಆಧಾರ್ ಕಾರ್ಡ್ ಸಂಖ್ಯೆ’ ಆಧಾರಿತ ನೇರ ನಗದು ವರ್ಗಾವಣೆ ವಿಧಾನದ ಮೂಲಕ ಈ ಯೋಜನೆಯಡಿ ಪ್ರಯೋಜನಗಳನ್ನು ನೀಡಲಾಗುತ್ತಿದೆ. ರಾಜ್ಯವು ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿರುವುದಕ್ಕೆ ಈ ಪ್ರಶಸ್ತಿ ಸಂದಿದೆ.
ಈ ಕಾರ್ಯಕ್ರಮದಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ರಾಜಕುಮಾರ್ ಖತ್ರಿ, ಕೃಷಿ ಇಲಾಖೆಯ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷೀತ್, ಕೃಷಿ ಇಲಾಖೆಯ ನಿರ್ದೇಶಕ ಬಿ.ವೈ. ಶ್ರೀನಿವಾಸ ಸೇರಿದಂತೆ ಕೇಂದ್ರ ಸರಕಾರದ ಅಧಿಕಾರಿಗಳು ಹಾಜರಿದ್ದರು.