ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ: 2,566 ಮಂದಿಗೆ ಪಾಸಿಟಿವ್, 13 ಮಂದಿ ಮೃತ್ಯು
ಬೆಂಗಳೂರಿನಲ್ಲಿ 1,490 ಮಂದಿಗೆ ಸೋಂಕು ದೃಢ
ಬೆಂಗಳೂರು, ಮಾ. 26: ರಾಜ್ಯದಲ್ಲಿ ಶುಕ್ರವಾರ ಒಟ್ಟು 2,566 ಹೊಸ ಕೊರೋನ ಪ್ರಕರಣಗಳು ದೃಢವಾಗಿದ್ದು, ರಾಜಧಾನಿ ಬೆಂಗಳೂರು ನಗರದಲ್ಲಿ ಒಟ್ಟು 1,490 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, 13 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 1,207 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕರ್ನಾಟ ರಾಜ್ಯದಲ್ಲಿ ಈಗಾಗಲೇ ಒಟ್ಟು ಕೊರೋನ ಸೋಂಕಿತರ ಸಂಖ್ಯೆ 9,81,044ಕ್ಕೆ ತಲುಪಿದ್ದು, ಒಟ್ಟು ಸಾವಿನ ಸಂಖ್ಯೆ 12,484ಕ್ಕೆ ತಲುಪಿದ್ದು, ಒಟ್ಟು ಸಕ್ರಿಯ ಕೊರೋನ ಪ್ರಕರಣಗಳ ಸಂಖ್ಯೆ 19,553ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
13 ಮಂದಿಯ ಬಲಿ: ಬೆಂಗಳೂರು ನಗರ-3 ಮಂದಿ, ಕಲಬುರಗಿ ಹಾಗೂ ಬೆಂಗಳೂರು ಗ್ರಾಮಾಂತರ ತಲಾ 2, ಬೆಳಗಾವಿ, ಬೀದರ್, ಕೋಲಾರ, ಮಂಡ್ಯ, ಮೈಸೂರು ಹಾಗೂ ತುಮಕೂರು ತಲಾ ಒಂದು ಸೇರಿದಂತೆ ಒಟ್ಟು 13 ಮಂದಿ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆಂದು ಆರೋಗ್ಯ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 2,566 ಪ್ರಕರಣಗಳು ದೃಢವಾಗಿದ್ದು, ಆ ಪೈಕಿ ಬೆಂಗಳೂರು ನಗರದಲ್ಲಿ ಅತ್ಯಂತ ಹೆಚ್ಚು 1,490 ಉಡುಪಿ-210, ಕಲಬುರಗಿ-109, ತುಮಕೂರು-126, ಮೈಸೂರು-67, ದಕ್ಷಿಣ ಕನ್ನಡ-72, ಬೀದರ್-65, ಹಾಸನ-32, ಮಂಡ್ಯ-34, ಧಾರವಾಡ-31, ವಿಜಯಪುರ-36, ಬೆಂ.ಗ್ರಾಮಾಂತರ-59, ಕೋಲಾರ-45 ಸೇರಿದಂತೆ ಒಟ್ಟು 2,566 ಹೊಸ ಪ್ರಕರಣಗಳು ಪತ್ತೆಯಾಗಿವೆ.
ರಾಜಧಾನಿಯಲ್ಲಿ ಆತಂಕ: ರಾಜ್ಯದ ರಾಜಧಾನಿಯಲ್ಲಿ ಬೆಂಗಳೂರಿನಲ್ಲಿ ಶುಕ್ರವಾರ ಒಟ್ಟು 1,490 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಮೂರು ಮಂದಿ ಸಾವನ್ನಪ್ಪಿದ್ದಾರೆ. ಒಂದು ವಾರದಿಂದ ಬೆಂಗಳೂರು ನಗರದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ನಗರದ ಜನರಲ್ಲಿ ಕೋವಿಡ್ ಆತಂಕ ಮನೆಮಾಡಿದೆ.
ಬೆಂಗಳೂರು ನಗರದಲ್ಲಿ ಇಲ್ಲಿಯವರೆಗೆ ಒಟ್ಟು 4,24,349 ಕೊರೋನ ಸೋಂಕಿತರು ದೃಢಪಟ್ಟಿದ್ದು, 4,572 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 4,06,449 ಜನರು ಕೋವಿಡ್-19 ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.