ಉದ್ಯಮಿ ಬಿ.ಆರ್.ಶೆಟ್ಟಿ ದಂಪತಿಯ ಆಸ್ತಿ ವರ್ಗಾವಣೆಗೆ ಹೈಕೋರ್ಟ್ ತಡೆ
ಬೆಂಗಳೂರು, ಎ.20: ಉದ್ಯಮಿ ಬಿ.ಆರ್.ಶೆಟ್ಟಿ ದಂಪತಿ ಹೊಂದಿರುವ ಬ್ಯಾಂಕ್ ಠೇವಣಿ, ಮ್ಯೂಚುಯಲ್ ಫಂಡ್ ಮತ್ತು ಹಣದಂತಹ ಚಲಿಸಬಲ್ಲ ಯಾವುದೇ ಚರಾಸ್ತಿಯನ್ನು ವರ್ಗಾವಣೆ ಮಾಡದಂತೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿ ಆದೇಶಿಸಿದೆ.
ಉದ್ಯಮಿಯ ಚರಾಸ್ತಿ ವರ್ಗಾವಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ವಾಣಿಜ್ಯ ಕೋರ್ಟ್ನ ಆದೇಶ ಪ್ರಶ್ನಿಸಿ ಬ್ಯಾಂಕ್ ಆಫ್ ಬರೋಡ ಸಲ್ಲಿಸಿದ್ದ ವಾಣಿಜ್ಯ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ.
ಇದೇ ವೇಳೆ ಸ್ಥಿರಾಸ್ತಿ ವರ್ಗಾವಣೆಗೆ ವಾಣಿಜ್ಯ ಕೋರ್ಟ್ ನೀಡಿರುವ ತಡೆಯಾಜ್ಞೆ ತೆರವು ಮಾಡಲು ನಿರಾಕರಿಸಿರುವ ಪೀಠ, ಚರಾಸ್ತಿಗಳ ಮಾರಾಟ, ಅಡಮಾನ ಸೇರಿದಂತೆ ಯಾವುದೇ ರೀತಿಯ ವರ್ಗಾವಣೆಗೆ ಅನುಮತಿ ಕೋರಿ ಬ್ಯಾಂಕ್ಗೆ ಅರ್ಜಿ ಸಲ್ಲಿಸಲು ಶೆಟ್ಟಿ ದಂಪತಿಗೆ ಅವಕಾಶವಿದೆ ಎಂದೂ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ: ಉದ್ಯಮಿ ಬಿ.ಆರ್. ಶೆಟ್ಟಿ ಅವರು ಯುಎಇಯಲ್ಲಿ ಹೊಂದಿರುವ ತಮ್ಮ ವ್ಯವಹಾರಗಳಿಗಾಗಿ ಬ್ಯಾಂಕ್ನಿಂದ 2,077 ಕೋಟಿ ರೂಪಾಯಿ ಸಾಲ ಪಡೆದಿದ್ದು, 2020ರ ಮೇ 5ರ ಪ್ರಕಾರ 1912 ಕೋಟಿ ಪಾವತಿಸಬೇಕಿದ್ದು, ಅದನ್ನು ಈವರೆಗೆ ಹಿಂದಿರುಗಿಸಿಲ್ಲ ಎಂದು ಬ್ಯಾಂಕ್ ಆಫ್ ಬರೋಡಾ ನಗರದ ವಾಣಿಜ್ಯ ಕೋರ್ಟ್ ನಲ್ಲಿ ದಾವೆ ಹೂಡಿದೆ.
ಈ ಅರ್ಜಿ ವಿಚಾರಣೆ ನಡೆಸಿದ್ದ ವಾಣಿಜ್ಯ ಕೋರ್ಟ್ ಬ್ಯಾಂಕ್ ಕೋರಿಕೆಯಂತೆ ಶೆಟ್ಟಿ ದಂಪತಿಯ ಸ್ಥಿರಾಸ್ತಿಗಳ ವರ್ಗಾವಣೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿದ್ದು, ಚರಾಸ್ತಿ ವರ್ಗಾವಣೆಗೆ ತಡೆ ನೀಡಲು ನಿರಾಕರಿಸಿದೆ.
ವಾಣಿಜ್ಯ ಕೋರ್ಟ್ನ ಈ ಆದೇಶ ಪ್ರಶ್ನಿಸಿ ಬ್ಯಾಂಕ್ ಆಫ್ ಬರೋಡಾ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು, ಇದೀಗ ಹೈಕೋರ್ಟ್ ಚರಾಸ್ತಿ ವರ್ಗಾವಣೆಗೂ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.