ಕೋವಿಡ್ ಪರೀಕ್ಷೆಗೆ ವೇಗ, ಫಲಿತಾಂಶ ತಡವಾದರೆ ಲ್ಯಾಬ್ಗಳಿಗೆ ದಂಡ: ಡಿಸಿಎಂ ಅಶ್ವತ್ಥ ನಾರಾಯಣ
20 ಸಾವಿರ ಆಕ್ಸಿಜನ್ ಬೆಡ್ ವ್ಯವಸ್ಥೆಗೆ ಮುಂದಾದ ಸರಕಾರ
ಬೆಂಗಳೂರು, ಮೇ 8: ಸುಪ್ರೀಂ ಕೋರ್ಟ್ 1,200 ಮೆ.ಟನ್ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಲು ಕೇಂದ್ರ ಸರಕಾರಕ್ಕೆ ಆದೇಶ ನೀಡಿದ ಬೆನ್ನಲ್ಲೇ ಸರಕಾರವು ಆಕ್ಸಿಜನ್ ಬೆಡ್ಗಳ ಪ್ರಮಾಣವನ್ನು ಇನ್ನೂ 20 ಸಾವಿರ ಹೆಚ್ಚಿಸಲು ಮುಂದಾಗಿದೆ ಎಂದು ಕೋವಿಡ್ ಕಾರ್ಯಪಡೆ ಅಧ್ಯಕ್ಷ, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಇಂದಿಲ್ಲಿ ಪ್ರಕಟಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಬಿಜೆಪಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 20 ಸಾವಿರ ಆಕ್ಸಿಜನ್ ಬೆಡ್ಗಳ ಪೈಕಿ ತಕ್ಷಣವೇ ತುರ್ತಾಗಿ 10ಸಾವಿರ ಬೆಡ್ ವ್ಯವಸ್ಥೆ ಮಾಡಲಾಗುವುದು. ಇದರೊಂದಿಗೆ ರಾಜ್ಯದಲ್ಲಿ ಉಂಟಾಗಿರುವ ಆಕ್ಸಿಜನ್ ಬೆಡ್ಗಳ ಹಾಹಾಕಾರ ನೀಗಲಿದೆ. ಕೋವಿಡ್ ಬರುವ ಮುನ್ನ ರಾಜ್ಯದಲ್ಲಿ ದಿನಕ್ಕೆ 100 ಮೆ. ನ್ ಆಕ್ಸಿಜನ್ ಮಾತ್ರ ಖರ್ಚಾಗುತ್ತಿತ್ತು. ಆದರೆ, ಈಗ ನಿತ್ಯವೂ 950 ಮೆ.ಟನ್ ಬೇಕಾಗುತ್ತಿದೆ. ಸದ್ಯಕ್ಕಿರುವ ಆಕ್ಸಿಜನ್ ಬೆಡ್ಗಳಿಗೆ ಸಾಕಾಗುವಷ್ಟು ಆಮ್ಲಜನಕ ನಮ್ಮಲ್ಲಿದೆ. ಆದರೆ, ಸೋಂಕಿತರು ಹೆಚ್ಚುತ್ತಿರುವುದರಿಂದ ಅನಿವಾರ್ಯವಾಗಿ ಬೆಡ್ಗಳನ್ನೂ ಹೆಚ್ಚಿಸಬೇಕಾಗಿರುವುದರಿಂದ ಹೆಚ್ಚುವರಿ ಆಮ್ಲಜನಕ ಬೇಕಿದೆ. ಆ ಕೊರತೆ ನ್ಯಾಯಾಲಯದ ಆದೇಶದಿಂದ ನೀಗಲಿದೆ ಎಂದರು.
ಇನ್ನು ಮುಂದೆ 24 ಗಂಟೆ ಒಳಗಾಗಿ ಕೋವಿಡ್ ಪರೀಕ್ಷೆ ವರದಿ ನೀಡಲಾಗುವುದು. ಖಾಸಗಿ ಅಥವಾ ಸರಕಾರದ್ದೆ ಲ್ಯಾಬೆ ಆಗಿದ್ದರೂ ಸರಕಾರ ನಿಗದಿ ಮಾಡಿದ ಸಮಯದೊಳಗೆ ಫಲಿತಾಂಶ ನೀಡದಿದ್ದರೆ ಪ್ರತಿ ಟೆಸ್ಟಿಗೆ 100ರಿಂದ 150 ರೂ. ದಂಡ ವಿಧಿಸಲಾಗುವುದು ಎಂದು ಅವರ ಎಚ್ಚರಿಕೆ ನೀಡಿದರು.
ಕೋವಿಡ್ ಕೇರ್ ಸೆಂಟರ್ಗಳಲ್ಲೂ ಆಕ್ಸಿಜನ್ ಬೆಡ್ ಹಾಕಲು ನಿರ್ಧರಿಸಲಾಗಿದೆ. ಅಲ್ಲಿಗೆ ಅಗತ್ಯ ನುರಿತ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದ ಅವರು, ಸದ್ಯಕ್ಕೆ ಈಗ ರಾಜ್ಯದಲ್ಲಿ 70,000 ಬೆಡ್ಗಳನ್ನು ಕೋವಿಡ್ಗೆ ಮೀಸಲಾಗಿ ಇಡಲಾಗಿದ್ದು, ಈ ಪೈಕಿ ಸರಕಾರದಿಂದ 35 ಸಾವಿರ ಹಾಗೂ ಖಾಸಗಿ ಆಸ್ಪತ್ರೆಗಳ ವತಿಯಿಂದ 35ಸಾವಿರ ಬೆಡ್ಗಳಿವೆ. ಈ ಒಟ್ಟು ಬೆಡ್ಗಳ ಪೈಕಿ 50ಸಾವಿರ ಆಕ್ಸಿಜನ್ ಬೆಡ್ಗಳಿವೆ ಎಂದರು.
ಇದೇ ವೇಳೆ ಆಕ್ಸಿಜನ್ ಬೆಡ್ಗಳ ಕೊರತೆಯನ್ನು ನೀಗಿಸಲು ಕ್ರಮ ವಹಿಸಲಾಗಿದೆ. ಶೇ.30ರಿಂದ 40ರಷ್ಟು ಗಂಭೀರವಲ್ಲದ ಸೋಂಕಿತರು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಆಕ್ಸಿಜನ್ ಬೆಡ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರನ್ನು ಕೂಡಲೇ ಸ್ಟೆಪ್ಡೌನ್ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲು ಸರಕಾರ ನಿರ್ಧರಿಸಿದೆ ಎಂದು ಡಾ.ಅಶ್ವತ್ಥ ನಾರಾಯಣ ತಿಳಿಸಿದರು.
ರೆಮ್ಡಿಸಿವಿರ್ ಸಮಸ್ಯೆ ಇಲ್ಲ: ರೆಮ್ಡಿಸಿವಿರ್ ಕೊರತೆ ಈಗಿಲ್ಲ. ಮೇ 9 ವರೆಗೂ 30,900 ಡೋಸ್ ಹಂಚಿಕೆಯಾಗಿತ್ತು. ಇನ್ನು 70 ಸಾವಿರ ಡೋಸ್ ಬರುವುದು ಬಾಕಿ ಇದೆ. ಇವತ್ತು-ನಾಳೆಗೆ ಕೊರತೆ ಇಲ್ಲ. ಎಲ್ಲ ಜಿಲ್ಲೆಗಳಿಗೂ ಹಂಚಿಕೆ ಮಾಡಲಾಗಿದೆ. ಮೇ 10ರ ನಂತರ ಒಂದು ವಾರ ಕಾಲ 2,60,000 ಡೋಸ್ ಹಂಚಿಕೆಯಾಗಿದ್ದು, ರಾಜ್ಯಕ್ಕೆ ಬರುವುದಿದೆ. ಈ ಲೆಕ್ಕದ ಪ್ರಕಾರ ಪ್ರತಿದಿನ ರಾಜ್ಯಕ್ಕೆ 37 ಸಾವಿರ ಡೋಸ್ ಲಭ್ಯವಾಗುತ್ತಿದೆ. ಹೀಗಾಗಿ ಕೊರತೆ ಪ್ರಶ್ನೆ ಇಲ್ಲ ಎಂದು ತಿಳಿಸಿದರು.
ನಿತ್ಯವೂ ನಮಗೆ ಪೂರೈಕೆ ಮಾಡಬೇಕಾದ ರೆಮ್ಡಿಸಿವಿರ್ ಕೋಟಾ ಸಕಾಲಕ್ಕೆ, ಸರಿಯಾಗಿ ಪೂರೈಕೆ ಮಾಡುವಂತೆ ಎಲ್ಲ ತಯಾರಿಕಾ ಕಂಪನಿಗಳಿಗೆ ಸರಕಾರ ಇವತ್ತೇ ನೋಟಿಸ್ ಕೂಡ ಜಾರಿ ಮಾಡುತ್ತಿದೆ ಎಂದ ಅವರು, ಇನ್ನು ಮುಂದೆ 24 ಗಂಟೆ ಒಳಗಾಗಿ ಕೋವಿಡ್ ಪರೀಕ್ಷೆ ರಿಸಲ್ಟ್ ನೀಡಲಾಗುವುದು. ಯಾವ ಲ್ಯಾಬೆ ಆಗಿರಲಿ. ಅದು ಖಾಸಗಿಯಾಗಿರಲಿ ಅಥವಾ ಸರಕಾರದ್ದೆ ಆಗಿರಲಿ ಸರಕಾರ ನಿಗದಿ ಮಾಡಿದ ಸಮಯದೊಳಗೆ ಫಲಿತಾಂಶ ನೀಡದಿದ್ದರೆ ಪ್ರತಿ ಟೆಸ್ಟಿಗೆ 100ರಿಂದ 150 ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟರು.
ಇಷ್ಟು ದಿನ ಸೋಂಕಿತರು ತಡವಾಗಿ ಪರೀಕ್ಷೆಗೆ ಬರುತ್ತಿದ್ದರು. ತಡವಾಗಿ ಪರೀಕ್ಷೆ ಮಾಡಿಸಿಕೊಂಡು ತಡವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಪ್ರಾಣ ಹಾನಿ ಹೆಚ್ಚಾಗುತ್ತಿತ್ತು. ಮುಂದೆ ಹೀಗೆ ಆಗಬಾರದು, ಆರ್ಟಿಪಿಸಿಆರ್ ಟೆಸ್ಟ್ ಗೆ ವೇಗ ಕೊಡಲಾಗಿದೆ. ಕೋವಿಡ್ ಬಂದಾಗ ಸರಕಾರಿ ವಲಯದಲ್ಲಿ ಕೇವಲ ಒಂದೇ ಲ್ಯಾಬ್ ಇತ್ತು. ಇವತ್ತು 91 ಲ್ಯಾಬ್ಗಳಿವೆ. ಖಾಸಗಿ ವಲಯದಲ್ಲಿ 150 ಲ್ಯಾಬ್ಗಳಿವೆ. ದಿನಕ್ಕೆ ಸರಕಾರದ ವತಿಯಿಂದ 10,500 ಟೆಸ್ಟ್ ಗಳನ್ನು ಮಾಡಬಹುದು. ಖಾಸಗಿ ಲ್ಯಾಬ್ಗಳಲ್ಲಿ 70,000 ಜನರಿಗೆ ಟೆಸ್ಟ್ ಆಗುತ್ತಿದೆ. ಅಂಕಿ-ಅಂಶಗಳ ಪ್ರಕಾರ ಶೇ.93ರಷ್ಟು ಆರ್ಟಿಪಿಸಿಆರ್ ಟೆಸ್ಟ್ ಆಗುತ್ತಿದ್ದರೆ, ಶೇ.7 ಮಾತ್ರ ರಾಟ್ ಟೆಸ್ಟ್ ಆಗುತ್ತಿದೆ. ಈಗ ರಾಟ್ ಟೆಸ್ಟ್ ಅನ್ನು ಎಷ್ಟು ಬೇಕಾದರೂ ಮಾಡಲು ಐಸಿಎಂಆರ್ ಒಪ್ಪಿಗೆ ಕೊಟ್ಟಿದ್ದು, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ರಾಟ್ ಕಿಟ್ಗಳನ್ನು ಒದಗಿಸಿ ಪರೀಕ್ಷೆಗಳನ್ನು ಹೆಚ್ಚಿಸಲಾಗುವುದು ಎಂದರು.
ಬೂತ್ ಮಟ್ಟದಲ್ಲಿ ಬಿಜೆಪಿ ನೆರವು: ಬಿಜೆಪಿ ಕಾರ್ಯಕರ್ತರು ಕೋವಿಡ್ ಸೋಂಕಿರಿಗೆ ನೆರವಾಗುತ್ತಿದ್ದಾರೆಂಬ ಮಾಹಿತಿ ಹಂಚಿಕೊಂಡ ಅವರು, ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಸೋಂಕಿತರಿಗೆ ಅಗತ್ಯವಾದ ಎಲ್ಲ ನೆರವು ಕೊಡುತ್ತಿದ್ದಾರೆ. ಆಹಾರ ಧಾನ್ಯ, ಔಷಧಿ, ವೈದ್ಯಕೀಯ ಸಂಪರ್ಕ, ಮಾಸ್ಕ್ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. 250 ಕೇಂದ್ರಗಳ ಮೂಲಕ ರಾಜ್ಯಾದ್ಯಂತ ಕಾರ್ಯಕರ್ತರು ಸಮರೋಪಾದಿಯಲ್ಲಿ ಸಹಾಯ ಮಾಡುತ್ತಿದ್ದಾರೆ.
ಅಲ್ಲದೆ, ಕೋವಿಡ್ ಕೇರ್ಗಳಲ್ಲೂ ಕಾರ್ಯಕರ್ತರು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಸರಕಾರದ ಕೋವಿಡ್ ಯಂತ್ರಾಂಗದ ಜತೆ ಸೇರಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಪಕ್ಷ ಮಾಡುತ್ತಿದೆ ಎಂದು ತಿಳಿಸಿದರು. ಪರಿಷತ್ ಸದಸ್ಯ ರವಿಕುಮಾರ್, ಪಕ್ಷದ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ಬಿಜೆಪಿ ಮಾಧ್ಯಮ ಸಂಚಾಲಕ ಪ್ರಶಾಂತ್ ಹಾಜರಿದ್ದರು.