''ನಮ್ಮ ಅಭಿಪ್ರಾಯ ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ, ನಮಗೆ ಪ್ರತ್ಯೇಕ ವ್ಯವಸ್ಥೆ ಮಾಡಿ''
ಪಕ್ಷದ ವರಿಷ್ಠರಿಗೆ ಬಿಜೆಪಿ ಶಾಸಕ ಸುನೀಲ್ ಕುಮಾರ್ ಮನವಿ
ಬೆಂಗಳೂರು, ಜೂ.8: ನಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲವಾದ್ದರಿಂದ ಪಕ್ಷದ ವರಿಷ್ಠರು ಅಭಿಪ್ರಾಯ ಆಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಕಾರ್ಕಳ ಶಾಸಕ, ವಿಧಾನಸಭೆಯ ಸರಕಾರಿ ಮುಖ್ಯಸಚೇತಕ ವಿ.ಸುನೀಲ್ ಕುಮಾರ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಳೆದ 3 ದಿನದಿಂದ ಮಾಧ್ಯಮದಲ್ಲಿ ಬರುತ್ತಿರುವ ಹೇಳಿಕೆಗಳು ಪಕ್ಷದ ಹಿತದೃಷ್ಟಿಯಿಂದ ಒಳಿತಲ್ಲ. ಈ ಅಭಿಪ್ರಾಯಗಳೇ ಎಲ್ಲಾ ಶಾಸಕರ, ಕಾರ್ಯಕರ್ತರ ಅಭಿಪ್ರಾಯ ಆಗುವುದಿಲ್ಲ. ನಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲವಾದ್ದರಿಂದ ಪಕ್ಷದ ವರಿಷ್ಠರು ಅಭಿಪ್ರಾಯ ಆಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ವಿನಂತಿಸಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಕೂಡಾ ಸುನೀಲ್ ಕುಮಾರ್ ಅವರು, ಸರಕಾರದ ಬೆಳವಣಿಗೆ, ನಿರ್ಧಾರ ಮತ್ತು ಪಕ್ಷದಲ್ಲಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನನ್ನ ಭಾವನೆಗಳು ಹಾಗೂ ಸಲಹೆಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು ಎಂದು ನಳೀನ್ ಕುಮಾರ್ ಕಟೀಲ್ ಅವರಿಗೆ ಪತ್ರ ಬರೆದಿದ್ದರು.