ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆ?
ಬೆಂಬಲಿಗರೊಂದಿಗೆ ಗೌಪ್ಯ ಸಭೆ ನಡೆಸುತ್ತಿರುವ ಮಾಜಿ ಸಚಿವ

ಚಾಮರಾಜನಗರ, ಜು.18: ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಬಿಜೆಪಿಗೆ ಸೇರ್ಪಡೆಯಾಗಲು ನಿರ್ಧರಿಸಿದ್ದು, ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಅವರು ಬೆಂಬಲಿಗರು ಹಾಗೂ ಮುಖಂಡರೊಂದಿಗೆ ಗೌಪ್ಯ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕೊಳ್ಳೇಗಾಲ ತಾಲೂಕಿನ ಕುರುಬನಕಟ್ಟೆಯಲ್ಲಿ ಶನಿವಾರ ಸುಮಾರು 50ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಸಭೆ ನಡೆಸಿದ ಶಾಸಕ ಮಹೇಶ್, ಕ್ಷೇತ್ರದ ಅಭಿವೃದ್ಧಿಯಾಗಬೇಕೆಂದರೆ ಆಡಳಿತ ಪಕ್ಷದಲ್ಲಿರುವುದು ಸೂಕ್ತ. ಅದರಂತೆ ಬಿಜೆಪಿ ಸೇರುವ ಚಿಂತನೆ ನಡೆಸುತ್ತಿದ್ದೇನೆ. ಬೆಂಬಲಿಗರು ಸಮ್ಮತಿಸಿದರೇ ಈ ಬಗ್ಗೆ ಮುಂದುವರಿಯಲಿದ್ದೇನೆ ಎಂದು ಹೇಳಿದ್ದರೆನ್ನಲಾಗಿದೆ. ಇದಕ್ಕೆ ಬೆಂಬಲಿಗರು ಸಹಮತ ವ್ಯಕ್ತಪಡಿಸಿದ್ದು, ಬಿಜೆಪಿ ಸೇರಲು ಯಾವುದೇ ಅಭ್ಯಂತರವಿಲ್ಲ ಎಂದಿದ್ದರೆನ್ನಲಾಗಿದೆ.
ಮುಂಬರುವ ತಾಪಂ ಹಾಗೂ ಜಿಪಂ ಚುನಾವಣೆಗೂ ಮುನ್ನ ಶಾಸಕ ಮಹೇಶ್ ಬಿಜೆಪಿ ಸೇರ್ಪಡೆಯಾಗುವುದು ಖಚಿತ ಎನ್ನಲಾಗುತ್ತಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಮಹೇಶ್ ಕೆಲ ತಿಂಗಳ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದಾದ ಬಳಿಕ, ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸದನಕ್ಕೆ ಗೈರಾಗಿ ಬಿಎಸ್ಪಿ ನಾಯಕಿ ಮಾಯವತಿಯವರ ಕೆಂಗಣ್ಣಿಗೆ ಗುರಿಯಾಗಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದರು.








