ನಂದಿನಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ
ಬೆಂಗಳೂರು, ಸೆ.29: ಹಾಲು ಮತ್ತು ಸಕ್ಕರೆಯ ಉಪ ಉತ್ಪನ್ನಗಳು ಬಹಳಷ್ಟಿವೆ. ಕೆಎಂಎಫ್ನ ಉತ್ಪನ್ನಗಳು ಕೂಡ ಉತ್ತಮವಾಗಿವೆ. ಹೀಗಾಗಿ ತನ್ನ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಣೆ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ಬುಧವಾರ ನಗರದ ಅರಮನೆ ಮೈದಾನದ ವೈಟ್ ಪೆಟಲ್ಸ್ನಲ್ಲಿ ಕರ್ನಾಟಕ ಹಾಲು ಮಹಾಮಂಡಳದ ನೂತನ ಯೋಜನೆಗಳಿಗೆ ಚಾಲನೆ ನೀಡಿ, ನಂದಿನಿ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಹಾಲಿನ ಉಪ ಉತ್ಪನ್ನಗಳ ಮಾರುಕಟ್ಟೆಯನ್ನು ಪರಿಣಾಮಕಾರಿಯಾಗಿ ವಿಸ್ತರಣೆ ಮಾಡಬೇಕು. ಈ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ದೊರೆತರೆ ಹೆಚ್ಚು ಹಾಲು ಉತ್ಪಾದನೆ ಆಗುತ್ತದೆ. ಮುಂದಿನ ಮೇ-ಜೂನ್ ತಿಂಗಳೊಳಗೆ 100 ಲಕ್ಷ ಲೀ. ಹಾಲು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಿ, ಅದಕ್ಕೆ ಬೇಕಾದ ಮಾರುಕಟ್ಟೆಯೂ ನಿಮಗೆ ದೊರೆಯುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಆರ್ಥಿಕವಾಗಿ ನಮ್ಮ ರಾಜ್ಯ ಮುಂದೆ ಬರಬೇಕಾದರೆ ದುಡಿಮೆಯಿಂದ ಮಾತ್ರ ಸಾಧ್ಯ. ಪಿರಮಿಡ್ನ ತಳಹಂತದಲ್ಲಿರುವ ದುಡಿಯುವ ವರ್ಗದವರು ಅಂದರೆ ರೈತರು, ಕೂಲಿಕಾರ್ಮಿಕರು ನಮ್ಮ ದೇಶದ ಆರ್ಥಿಕ ಪಗ್ರತಿಗೆ ಕಾರಣೀಭೂತರು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಸಹಕಾರಿ ರಂಗ ಶಕ್ತಿಯುತ ಕ್ಷೇತ್ರ: ಸಹಕಾರಿ ರಂಗ ಬಹಳ ಶಕ್ತಿಯುತವಾದ ಕ್ಷೇತ್ರ. ಆದರೆ, ಪೂರ್ಣಪ್ರಮಾಣದಲ್ಲಿ ಉತ್ತಮ ರೀತಿ ಸದುಪಯೋಗ ಆಗಬೇಕಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್ ಮಾದರಿಯಲ್ಲಿ ಸಹಕಾರಿ ರಂಗ ಶಕ್ತಿ ಶಾಲಿ ಆಗಬೇಕು. ‘ಸರ್ವ ಜನರಿಗೂ ಸಮಪಾಲು' ಎನ್ನುವ ಸಹಕಾರಿ ರಂಗದ ಮೂಲ ಉದ್ದೇಶಕ್ಕೆ ಯಾವ ಕಾರಣದಿಂದಲೂ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಂಡಾಗ ಮಾತ್ರ ಸಹಕಾರಿ ರಂಗಕ್ಕೆ ಅರ್ಥ ಬರುತ್ತದೆ ಎಂದು ಅವರು ತಿಳಿಸಿದರು.
ಕೃಷಿ ಬೆಳೆದಿದೆ, ಹಸಿರು ಕ್ರಾಂತಿಯಾಗಿದೆ. 130 ಕೋಟಿ ಜನಸಂಖ್ಯೆಗೆ ಆಹಾರ ಒದಗಿಸಿಕೊಳ್ಳುವ ಸ್ವಾವಲಂಬಿ ದೇಶ ಭಾರತ. ಆದರೆ ಹಸಿರು ಕ್ರಾಂತಿಗೆ ಕಾರಣನಾದ ಅನ್ನದಾತ ಬೆಳೆದಿಲ್ಲ. ಎಲ್ಲಿದ್ದಾನೋ ಅಲ್ಲೇ ಇದ್ದಾನೆ. ಕೃಷಿಕನ ಮೇಲೆ ನಮ್ಮ ಲಕ್ಷ್ಯ ಇರಬೇಕಿದೆ ಎಂದು ಮುಖ್ಯಮಂತ್ರಿ ಕರೆ ನೀಡಿದರು.
ಸಹಕಾರಿ ರಂಗದ ಶಕ್ತಿಯನ್ನು ಕರ್ನಾಟಕ ಹಾಲು ಉತ್ಪಾದಕರ ಸಂಘಗಳಲ್ಲಿ ಕಾಣಬೇಕು. ನಮ್ಮ ಪ್ರಧಾನಿ ನರೇಂದ್ರ ಮೋದಿ ರೈತರ ಆದಾಯ ದ್ವಿಗುಣಗೊಳಿಸಲು ಉದ್ದೇಶಿಸಿದ್ದಾರೆ. ಆದಾಯ ಹೆಚ್ಚಿಸುವಲ್ಲಿ ಹೈನುಗಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಸಮಗ್ರ ಕೃಷಿ, ಕೃಷಿಕನ ಭೂಮಿ ಕೇವಲ ಬೆಳೆ ಬೆಳೆಯಲು ಮಾತ್ರವಲ್ಲ ಇತರ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯವಾಗುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೆಲಸ ಮಾಡುತ್ತಿವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಗೋ ಶಾಲೆ ನಿರ್ಮಾಣ: ಹಾಲು ನಿರಂತರವಾಗಿ ಅವಶ್ಯಕತೆ ಇರುವಂತಹ ವಸ್ತು. ಹಾಲು ಕೊಡುವ ಗೋವಿನ ರಕ್ಷಣೆ ಕೂಡ ಅತ್ಯವಶ್ಯಕ. ಗೋವುಗಳು ಹಾಲು ಕೊಡುವುದನ್ನು ನಿಲ್ಲಿಸಿದಾಗಲೂ ಅದರ ರಕ್ಷಣೆ ನಮ್ಮ ನೈತಿಕ ಜವಾಬ್ದಾರಿ. ಗೋವನ್ನು ಕಸಾಯಿಖಾನೆಗೆ ನೀಡಲು ನಿಷೇಧ ಹೇರಿ ಕಾನೂನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಎಲ್ಲ ಜಿಲ್ಲೆಗಳಲ್ಲಿ ಗೋಶಾಲೆ ನಿರ್ಮಿಸಲು ಬೇಕಾದ ಅನುದಾನ ನೀಡಲಾಗುವುದು. ಸರಕಾರ ಗೋಶಾಲೆ ನಿರ್ಮಾಣ ಮಾಡುತ್ತದೆ. ಅದರ ನಿರ್ವಹಣೆ, ರಕ್ಷಣೆಯ ಜವಾಬ್ದಾರಿ ಕೆಎಂಎಫ್ ತೆಗೆದುಕೊಳ್ಳಬೇಕು. ಲಾಭವೂ ಇಲ್ಲದ ನಷ್ಟವೂ ಇಲ್ಲದ ಆಧಾರದ ಮೇಲೆ ಗೋ ರಕ್ಷಣೆ ಮಾಡಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಕೆಎಂಎಫ್ ನಂ.1 ಸಂಸ್ಥೆಯಾಗಿ ಬೆಳೆಯಬೇಕು: ಕೆಎಂಎಫ್ ಸಂಸ್ಥೆ ಇಡೀ ದೇಶದಲ್ಲಿ ನಂಬರ್ 1 ಸಂಸ್ಥೆಯಾಗಬೇಕು. ಹೊಸ ತಂತ್ರಜ್ಞಾನ ಬಳಸುವ ಮೂಲಕ ಹಾಲು ಉತ್ಪಾದನೆ ಹೆಚ್ಚಿಸಿ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬರಬೇಕು. ಉತ್ತರ ಕರ್ನಾಟಕದಲ್ಲಿಯೂ ಹಾಲು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಹೇಳಿದರು.
ದಕ್ಷಿಣ ಕರ್ನಾಟಕದ ಮಾದರಿಯಲ್ಲಿಯೇ ಹಾಲು ಉತ್ಪಾದನೆಯಲ್ಲಿ ಅಭಿವೃದ್ಧಿ ಹೊಂದಬೇಕು. ಬೆಳಗಾವಿ, ಬಿಜಾಪುರ, ಬಾಗಲಕೋಟೆ ಸೇರಿದಂತೆ ಉತ್ತರಕರ್ನಾಟಕದಲ್ಲಿ ಹೆಚ್ಚಿನ ನೀರಾವರಿ ಹೆಚ್ಚು ಹಸಿರನ್ನು ಹೊಂದಿರುವ ಪ್ರದೇಶ. ಹಾಲು ಉತ್ಪಾದಕರನ್ನೂ ಹಾಗೂ ಸಂಸ್ಥೆಯನ್ನೂ ರಕ್ಷಣೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹಾಲು ಉತ್ಪಾದಕರಿಗೆ ರಾಜ್ಯ ಸರಕಾರ ಪ್ರತಿ ಲೀಟರ್ ಹಾಲಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು 5 ರೂ.ಗಳಿಂದ 6 ರೂ.ಗಳಿಗೆ ಹೆಚ್ಚಿಸುವಂತೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾಡಿದ ಮನವಿ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಪ್ರೋತ್ಸಾಹ ಧನ ಹೆಚ್ಚಳ ಮಾಡುವ ಕುರಿತು ನಾನು ಯಾವುದೆ ಆಶ್ವಾಸನೆ ನೀಡುವುದಿಲ್ಲ ಎಂದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಅಧಿಕಾರವಧಿಯಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿದ್ದರು. ಕೋವಿಡ್ ಸಂದರ್ಭದಲ್ಲಿಯೂ 1250 ಕೋಟಿ ರೂ.ಗಳ ನೆರವು ನೀಡಲಾಗಿದೆ. ಯಡಿಯೂರಪ್ಪ ಸರಕಾರದ ಅವಧಿಯಲ್ಲಿನ ಯೋಜನೆಗಳು ಮುಂದುವರೆಯಲಿವೆ. ಅಲ್ಲದೆ, ಈ ವರ್ಷ ಕೆಎಂಎಫ್ಗೆ 50 ಕೋಟಿ ರೂ.ಗಳ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಉದ್ಘಾಟನೆಗೊಂಡ ಯೋಜನೆಗಳು: ನಂದಿನಿ ಹೈಟೆಕ್ ಮೆಗಾ ಹಾಲಿನ ಪುಡಿ ಉತ್ಪಾದನಾ ಘಟಕ, ಧಾರವಾಡದಲ್ಲಿ ಪಶು ಆಹಾರ ಉತ್ಪಾದನಾ ಘಟಕ-2, ಗುಬ್ಬಿಯಲ್ಲಿ ಪಶು ಆಹಾರ ಉತ್ಪಾದನಾ ಘಟಕ-2, ಹೆಸರುಘಟ್ಟದಲ್ಲಿ ಹೈಟೆಕ್ ಬುಲ್ ಮದರ್ ಫಾರಂ ಮತ್ತು ಮೇವು ಅಭಿವೃದ್ಧಿ ಕೇಂದ್ರ, ಬೆಂಗಳೂರಿನಲ್ಲಿ ರಾಜ್ಯ ಕೇಂದ್ರೀಯ ಪ್ರಯೋಗಾಲಯ, ಕಲಬುರ್ಗಿಯಲ್ಲಿ ಕೆಎಂಎಫ್ ತರಬೇತಿ ಕೇಂದ್ರ, ಹಾಸನ ಪಶು ಆಹಾರ ಘಟಕದಲ್ಲಿ ಗೋದಾಮು, ಆಡಳಿತ ಕಚೇರಿ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳು, ರಾಜಾನುಕುಂಟೆ ಪಶು ಆಹಾರ ಘಟಕದಲ್ಲಿ ಗೋದಾಮು, ಆಡಳಿತ ಕಚೇರಿ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳು, ಶಿಕಾರಿಪುರದ ಪಶು ಆಹಾರ ಘಟಕದಲ್ಲಿ ಕಾಕಂಬಿ ಶೇಖರಣಾ ಟ್ಯಾಂಕ್ ಹಾಗೂ ಬೆಂಗಳೂರಿನ ಚಳ್ಳಘಟ್ಟದಲ್ಲಿ ಬೆಣ್ಣೆ ದಾಸ್ತಾನಿನ ಡೀಪ್ ಫ್ರೀಜರ್ ಘಟಕವನ್ನು ಮುಖ್ಯಮಂತ್ರಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್, ಸಂಸದ ಡಾ.ಉಮೇಶ್ ಜಾಧವ್ ಉಪಸ್ಥಿತರಿದ್ದರು.
ಹಾಲು ಉತ್ಪಾದಕರ ಬ್ಯಾಂಕ್ ತೆರೆಯಿರಿ
ಸಹಕಾರಿ ಸಂಸ್ಥೆಗಳು ಶ್ರೀಮಂತಗೊಳ್ಳಬೇಕು. ಸಹಕಾರ ಕ್ಷೇತ್ರದ ಪ್ರತಿಯೊಬ್ಬರೂ ಆರ್ಥಿಕವಾಗಿ ಸಬಲರಾಗಬೇಕಿದೆ. ಈ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರ ಬ್ಯಾಂಕ್ ತೆರೆಯಿರಿ. ಕೆಎಂಎಫ್ಗೆ ಇದಕ್ಕಾಗಿ ಬೇಕಿರುವ ಎಲ್ಲ ಅರ್ಹತೆಯಿದೆ. ಈ ಕಾರ್ಯ ಅನುಷ್ಠಾನಕ್ಕೆ ಬಂದರೆ ಸರಕಾರದ ಬಳಿ ಪದೇ ಪದೇ ಅನುದಾನ ಕೇಳುವುದು ತಪ್ಪುತ್ತದೆ. ಕೆಎಂಎಫ್ ಈ ನಿಟ್ಟಿನಲ್ಲಿ ಮುಂದುವರೆದರೆ ರಾಜ್ಯ ಸರಕಾರ 100 ಕೋಟಿ ರೂ.ಗಳ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.