ಕೋಲಾರ; ಆತ್ಮಹತ್ಯೆಗೆ ಯತ್ನಿಸಿದ್ದ ಒಂದೇ ಕುಟುಂಬದ ಐವರ ಪೈಕಿ ನಾಲ್ವರು ಮೃತ್ಯು
ಮಗು ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ತನಿಖೆಗೆ ಹೆದರಿದ್ದ ಕುಟುಂಬ
ಕೋಲಾರ : ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಗೆ ದಾಖಲಾಗಿದ್ದ ನಾಲ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಕೋಲಾರ ನಗರದ ಕಾರಂಜಿಕಟ್ಟೆ ಬಡಾವಣೆಯಲ್ಲಿ ಪೊಲೀಸ್ ತನಿಖೆಗೆ ಹೆದರಿ ಮನೆಯಲ್ಲಿ ನಿನ್ನೆ ಸಂಜೆ ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಂದು ಆರ್. ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಮುನಿಯಪ್ಪ(70), ಬಾಬು (45), ಗಂಗೋತ್ರಿ(17) ಹಾಗೂ ನಾರಾಯಣಮ್ಮ (65) ಮೃತಪಟ್ಟಿದ್ದಾರೆ. ಪುಷ್ಪ (33) ಅವರ ಸ್ಥಿತಿ ಚಿಂತಾಜನಕವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪುಷ್ಪ ಅವರು ಗಂಡು ಮಗುವೊಂದನ್ನು ಬೇರೊಬ್ಬರಿಗೆ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದು ವಿಚಾರಣೆ ನಡೆಸಲಾಗಿತ್ತು. ಕೇಸ್ ದಾಖಲಾಗಿದ್ದಕ್ಕೆ ಮಾನಕ್ಕೆ ಅಂಜಿದ ಪುಷ್ಪ ಕುಟುಂಬಸ್ಥರೆಲ್ಲರಿಗೂ ವಿಷವಿಕ್ಕಿ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ.
ಕೋಲಾರದ ಗಲ್ ಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.