ಧಾರವಾಡ: ವೈದ್ಯಕೀಯ ಕಾಲೇಜಿನಲ್ಲಿ ಕೊರೋನ ಪ್ರಕರಣ; ಸೋಂಕಿತರ ಸಂಖ್ಯೆ 182ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
ಧಾರವಾಡ, ನ.26: ಧಾರವಾಡದ ಸತ್ತೂರು ಬಡಾಣೆಯಲ್ಲಿರುವ ಎಸ್ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಕೊರೋನ ವೈರಸ್ ಸೋಂಕಿಗೆ ಒಳಗಾದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಇದೀಗ 66 ರಿಂದ 182 ಕ್ಕೆ ಏರಿದೆ ಎಂದು ndtv.com ವರದಿ ಮಾಡಿದೆ.
ಆರಂಭದಲ್ಲಿ ಎಸ್ಡಿಎಂ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ನಲ್ಲಿರುವ ನಾಲ್ವರು ವಿದ್ಯಾರ್ಥಿಗಳಲ್ಲಿ ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ 300 ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿದಾಗ 66 ವಿದ್ಯಾರ್ಥಿಗಳು ಕೋವಿಡ್ ಗೆ ಪಾಸಿಟಿವ್ ಆಗಿರುವುದು ಬುಧವಾರ ದೃಢಪಟ್ಟಿತ್ತು.
ಗುರುವಾರ 200 ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿದ ಬಳಿಕ ಕಾಲೇಜಿನಲ್ಲಿ ಸೋಂಕಿತರ ಸಂಖ್ಯೆ ಇದೀಗ 66 ರಿಂದ 182 ಕ್ಕೆ ಏರಿದೆ.
ಸೋಂಕು ದೃಢಪಟ್ಟಿರುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕೋವಿಡ್ ಲಸಿಕೆಯ ಸಂಪೂರ್ಣ 2 ಡೋಸ್ ಪಡೆದಿದ್ದರು ಎಂದು ತಿಳಿದು ಬಂದಿದೆ.
ಸದ್ಯ ಸೋಂಕಿತ ವಿದ್ಯಾರ್ಥಿಗಳನ್ನು ಹಾಸ್ಟೆಲ್ನಲ್ಲೇ ಕ್ವಾರಂಟೈನ್ ಮಾಡಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ತಿಳಿಸಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆಯು ಇಂದು ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಕ್ಲಿನಿಕಲ್ ಮತ್ತು ನಾನ್ ಕ್ಲಿನಿಕಲ್) ಸುಮಾರು 3,000 ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಪರೀಕ್ಷಿಸಲು ನಿರ್ಧರಿಸಿದ್ದು, ಈ ವರೆಗೆ ಕನಿಷ್ಠ 1,000 ಜನರನ್ನು ಪರೀಕ್ಷಿಸಲಾಗಿದೆ ಮತ್ತು ಅವರ ಕೋವಿಡ್ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ.