ಖಾನಾಪುರ ಕ್ಷೇತ್ರದ ಅಭಿವೃದ್ಧಿಗೆ ಆಗ್ರಹಿಸಿ ಸುವರ್ಣ ವಿಧಾನಸೌಧಕ್ಕೆ ಶಾಸಕಿ ಅಂಜಲಿ ನಿಂಬಾಳ್ಕರ್ ಪಾದಯಾತ್ರೆ

photo: @DrAnjaliTai (ಅಂಜಲಿ ನಿಂಬಾಳ್ಕರ್)
ಬೆಂಗಳೂರು, ಡಿ. 12: ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಕ್ಷೇತ್ರದ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರು ಖಾನಾಪುರದಿಂದ ಬೆಳಗಾವಿ ಸುವರ್ಣ ವಿಧಾನಸೌಧದ ವರೆಗೆ ಸಂಘರ್ಷ ಪಾದಯಾತ್ರೆ ಆರಂಭಿಸಿದ್ದಾರೆ.
ರವಿವಾರ ಖಾನಾಪುರ ನಗರದಲ್ಲಿನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಟಿಪ್ಪು ಸುಲ್ತಾನ್ ಹಾಗೂ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅಂಜಲಿ ನಿಂಬಾಳ್ಕರ್ ಅವರು ಗೌರವ ಸಲ್ಲಿಸಿದರು. ಈ ವೇಳೆ ಅವರೊಂದಿಗೆ ಇದ್ದ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ನಿಂಬಾಳ್ಕರ್ ಅವರ ಮೇಲೆ ಹೂವು ಎರಚಿ, ಪುಷ್ಪ ಮಾಲೆ ಹಾಕಿ, ಡೊಳ್ಳು, ತಾಳ ವಾದ್ಯಗಳೊಂದಿಗೆ ಪಾದಯಾತ್ರೆಗೆ ಹೆಜ್ಜೆ ಹಾಕಿದರು.
ವಿಶೇಷ ಪ್ಯಾಕೇಜ್ ಅಗತ್ಯ: ಈ ವೇಳೆ ಮಾತನಾಡಿದ ಶಾಸಕಿ ಅಂಜಲಿ ನಿಂಬಾಳ್ಕರ್, `ಖಾನಾಪುರ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಭಾಗವಹಿಸಲು ಕ್ಷೇತ್ರದ ಜನತೆಯೊಂದಿಗೆ ನಾವು ಸುವರ್ಣವಿಧಾನಸೌಧ ಚಲೋ ಹಮ್ಮಿಕೊಂಡಿದ್ದೇವೆ. ಗಡಿಭಾಗದಲ್ಲಿರುವ ಕ್ಷೇತ್ರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿವೆ. ಹೀಗಾಗಿ ಈ ಭಾಗದಲ್ಲಿ ರಸ್ತೆ, ಸೇತುವೆಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಅವಶ್ಯಕತೆ ಇದೆ' ಎಂದು ಆಗ್ರಹಿಸಿದರು.
ಕ್ಷೇತ್ರದಲ್ಲಿ ಅರಣ್ಯ ಪ್ರದೇಶವೇ ಹೆಚ್ಚಾಗಿದ್ದು, ಶಾಲೆ-ಕಾಲೇಜುಗಳ ಮಕ್ಕಳಿಗೆ ಬಸ್ ಸೌಲಭ್ಯವಿಲ್ಲ. ರೈತರ ಬೆಳೆಗಳು ಹಾನಿಯಾಗಿದ್ದು ಅದಕ್ಕೆ ಸೂಕ್ತ ಪರಿಹಾರವೂ ಸಿಕ್ಕಿಲ್ಲ. ರೈತರು, ಮಹಿಳೆಯರು ಹಾಗೂ ಶಾಲಾ-ಕಾಲೇಜುಗಳ ಮಕ್ಕಳೂ ಈ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಸರಕಾರ ಕೂಡಲೇ ನೆರವು ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.
ಖಾನಾಪುರದಿಂದ ಆರಂಭವಾಗಿರುವ ಪಾದಯಾತ್ರೆ ಡಿ.12ರ ರಾತ್ರಿ ವೇಳೆಗೆ ಯಳ್ಳೂರು ತಲುಪುವ ಗುರಿ ಹೊಂದಿದ್ದೇವೆ. ಇನ್ನು ರಾಷ್ಟ್ರೀಯ ಹೆದ್ದಾರಿ ಸೇರುತ್ತಿದ್ದಂತೆ ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಮುಖಂಡರು ನಮ್ಮೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದು ಅಂಜಲಿ ನಿಂಬಾಳ್ಕರ್ ತಿಳಿಸಿದರು.







