-

ಫೇಸ್‌ಬುಕ್‌ ನಲ್ಲಿ ʼಎಲ್ಲರ ಕನ್ನಡʼ ಅಭಿಯಾನ: ಪರ-ವಿರೋಧ ಚರ್ಚೆ

-

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯವಾಗಿ ಫೇಸ್‌ಬುಕ್‌ನಲ್ಲಿ 'ಎಲ್ಲರ ಕನ್ನಡʼ ಕುರಿತಾಗಿನ ಚರ್ಚೆ ಜೋರಾಗಿದೆ. ಕನ್ನಡದಲ್ಲಿ ಸೇರಿಕೊಂಡಿರುವ ಅನಗತ್ಯ ಸಂಸ್ಕ್ರತ ಪದಗಳನ್ನು, ಮೂಲ ಕನ್ನಡದಲ್ಲಿ ಹಾಗೂ ಆಡುನುಡಿಯಲ್ಲಿ ಬಳಕೆಯಲ್ಲಿಲ್ಲದ ʼಮಹಾಪ್ರಾಣ, ಒತ್ತಕ್ಷರಗಳ ಬಳಕೆಯನ್ನು ಇಲ್ಲವಾಗಿಸಬೇಕು ಎಂಬ ಆಗ್ರಹದ  ʼಎಲ್ಲರ ಕನ್ನಡʼ ಅಭಿಯಾನ ನಡೆಯುತ್ತಿದೆ.

ಇದೀಗ ಈ ವಿಚಾರದ ಕುರಿತು ಪರ -ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. 'ಎಲ್ಲರ ಕನ್ನಡದ' ಪರ ವಾದಿಸುವವರು ಜನರು ಮಾತನಾಡುವ ಕನ್ನಡಕ್ಕೆ ಹತ್ತಿರವಾಗುವಂತ ಒಂದು ಸಾಮಾನ್ಯ ಕನ್ನಡವನ್ನು ಸಾಧ್ಯವಾಗಿಸುವುದೇ ಎಲ್ಲರ ಕನ್ನಡ ಎನ್ನುತ್ತಿದ್ದಾರೆ. ಆದರೆ  ಇದುವರೆಗೂ ಕಲಿತ, ಬಳಸಿದ ಭಾಷಾ ಶೈಲಿಯನ್ನು  ಕೈಬಿಡಲು  ತಯಾರಿಲ್ಲದವರು ಹಾಗೂ ಹೊಸ ಶೈಲಿಗೆ ತೆರೆದುಕೊಳ್ಳುವಾಗ ಉಂಟಾಗಬಹುದಾದ ಗೊಂದಲಗಳ ಕಾರಣಕ್ಕೆ ಈ  'ಎಲ್ಲರ ಕನ್ನಡಕ್ಕೆ' ವಿರೋಧವೂ ವ್ಯಕ್ತವಾಗುತ್ತಿದೆ.

ನಾಡಿನ ಎಲ್ಲಾ ಪ್ರಾಂತ್ಯದವರಿಗೂ ಅನುಕೂಲವಾಗುವಂತೆ, ಈಗ ಇರುವ ಸ್ವರೂಪದಲ್ಲಿಯೇ ಸರಳೀಕರಿಸುವ ಅಗತ್ಯವಿದೆ ಎಂದು ಎಲ್ಲರ ಕನ್ನಡದ ಪರವಿರುವವರು ವಾದಿಸುತ್ತಾರೆ. ಬಹುಸಂಖ್ಯಾತ ಕನ್ನಡಿಗರು ಮಹಾಪ್ರಾಣ ಶಬ್ಧಗಳನ್ನು ದೈನಂದಿನ ಬದುಕಿನಲ್ಲಿ ಬಳಸುವುದಿಲ್ಲ. ಇದು ಸಂಸ್ಕೃತದಿಂದ ಎರವಲು ಆಗಿರುವುದು ಎಂದು ಹೇಳುತ್ತಾರೆ.
 
ಇದೇ ವಾದವನ್ನು ಮುಂದುವರೆಸುವಂತೆ, ಕವಿ ಶಂಕರ್‌ ಕೆಂಚನೂರು “ಬ್ರಾಹ್ಮಣರು ತಮ್ಮ ಸಂಸ್ಕೃತದ ದೇವರುಗಳ ಕತೆಯನ್ನು ಕನ್ನಡದಲ್ಲಿ ಹೇಳಬೇಕಿದ್ದರೆ ಪದೆಪದೇ ಸಂಸ್ಕೃತದ ಮೊರೆ ಹೊಕ್ಕಲೇಬೇಕಿತ್ತು. ಅವರ ಸಂಸ್ಕೃತಿಯ ಆಚರಣೆಗಳಿಗೆ, ದೇವರುಗಳಿಗೆ, ದಿನನಿತ್ಯದ ಕೆಲಸಗಳಿಗೆ ಕನ್ನಡದಲ್ಲಿ ಪದಗಳು ಅಷ್ಟಾಗಿ ಇದ್ದಿರಲಿಲ್ಲ. ಹಾಗಾಗಿ ಅವರು ಅದನ್ನೆಲ್ಲ ಸಂಸ್ಕೃತದಿಂದ ತಂದು ಕನ್ನಡದ ಜಾಯಮಾನಕ್ಕೆ ಒಗ್ಗಿಸಿದರು ಮತ್ತು ಕೆಲವನ್ನು ಹಾಗೇ ಬಳಸಿದರು” ಎನ್ನುತ್ತಾರೆ.
 
ಎಲ್ಲರ ಕನ್ನಡಕ್ಕೆ ಸಾಮಾಜಿಕ ತಾರತಮ್ಯದ ಆಯಾಮವೂ ಇದ್ದು, ಇದುವರೆಗೂ ಸಂಸ್ಕೃತೀಕರಣಗೊಂಡ ಕನ್ನಡವನ್ನು ಶುದ್ಧ ಕನ್ನಡವೆಂದೋ, ಅಥವಾ ಉತ್ತಮ ಕನ್ನಡವೆಂದೂ ಪ್ರತಿಬಿಂಬಿಸಲಾಗಿದೆ. ಆದರೆ, ಸಾಮಾನ್ಯ ಕನ್ನಡಿಗನಿಗೆ ಮಹಪ್ರಾಣದ ಉಚ್ಚರಣೆಗಳು ಕಷ್ಟವಾಗುತ್ತಿದೆ, ಯಾಕೆಂದರೆ ಅದು ಅವರು ಬೆಳೆಯುತ್ತಾ ಆಡಿದ ಕನ್ನಡದಲ್ಲಿ ಇರುವುದಿಲ್ಲ. ಆದರೆ, ಅದನ್ನೇ ಇಟ್ಟುಕೊಂಡು ಹಿಯಾಳಿಸುವುದು, ಮೂದಲಿಸುವುದು ನಡೆದು ಬಂದಿದೆ. ಆ ನಿಟ್ಟಿನಲ್ಲಿ ಎಲ್ಲರ ಕನ್ನಡವು ಈ ಸಾಂಸ್ಕೃತಿಕ ಸಂಕೋಲೆಗಳನ್ನು ತೊಡೆದು ಹಾಕಬಹುದು ಎಂಬ ವಾದವಿದೆ.

“ಕನ್ನಡದಲ್ಲಿ ಯಾರು ಏನು ಬರೆಯುತ್ತಿದ್ದಾರೆಂದು ಚರ್ಚೆ ಮಾಡುವ ಜೊತೆಜೊತೆಗೇ ಬರೆಯುವವರು ಎಲ್ಲ ಜಾತಿ, ವರ್ಗ ಸಮುದಾಯಗಳಿಂದ, ಸಮಾನ ಪರಿಶ್ರಮದಿಂದ ಬಂದವರಾಗಿದ್ದಾರೆಯೇ ಎನ್ನುವುದನ್ನು ಚರ್ಚಿಸುವುದೂ ಮುಖ್ಯವಾಗುತ್ತದೆ. ಮಹಾಪ್ರಾಣಾದಿಗಳನ್ನು ಸರಿಯಾಗಿ ಬರೆಯಲು ಬರುವುದಿಲ್ಲವೆಂದು ನಿಂದನೆಗೆ ಒಳಗಾಗುವ ಕನ್ನಡಿಗರು ಯಾವ ಯಾವ ಸಮುದಾಯಗಳಿಗೆ ಸೇರಿದವರು? ಅಗತ್ಯವೇ ಇಲ್ಲದ್ದನ್ನು ಸಾಮರ್ಥ್ಯವೆಂದು ಬಿಂಬಿಸುತ್ತ, ಭಾಷೆಯ ಹೆಸರಲ್ಲಿ ಸಾಂಸ್ಕೃತಿಕ ರಾಜಕಾರಣ ಮಾಡುವುದು ತರವೇ? ಮುಂತಾದ ಪ್ರಶ್ನೆಗಳನ್ನು ಲಿಪಿ ಸುಧಾರಣಾವಾದಿಗಳು ಕೇಳುತ್ತಾರೆ. ಇವು ʼಏನು ಬರೆಯುತ್ತಾರೆʼ ಎನ್ನುವುದರ ಭಾಗವೇ ಆಗಿದೆ” ಎಂದು ಅಮರ್‌ ಹೊಳೆಗದ್ದೆ ಹೇಳುತ್ತಾರೆ.

“ಎಲ್ಲರ ಕನ್ನಡ ಅನ್ನುವುದು ಆಡುಗನ್ನಡ ಮತ್ತು ಬರೆಗನ್ನಡವನ್ನು ಒಂದೇ ಆಗಿಸುವುದಲ್ಲ. ಬದಲಿಗೆ ಎಲ್ಲಾ ಆಡುಗನ್ನಡಗಳಿಗೆ ಹತ್ತಿರವಾಗುವಂತ ಒಂದು standard ಕನ್ನಡವನ್ನು ಸಾದ್ಯವಾಗಿಸುವುದೇ #ಎಲ್ಲರ ಕನ್ನಡ. ಅಂದರೆ ಇದು ಈಗ ಚಾಲ್ತಿಯಲ್ಲಿರುವಂತೆ ಕೆಲವೇ ಕನ್ನಡಿಗರಿಗೆ ಅನುಕೂಲವಾಗುವಂತ ಒಂದು Standardised ಕನ್ನಡದ ಜಾಗದಲ್ಲಿ ಎಲ್ಲಾ ಅತವಾ ಹೆಚ್ಚು ಕನ್ನಡಿಗರಿಗೆ ಸುಲಬವಾಗುವಂತ ಒಂದು standard ಕನ್ನಡವನ್ನು ನೆಲೆಗೊಳಿಸುವುದು.” ಎಂದು ಎಲ್ಲರ ಕನ್ನಡವನ್ನು ಬಲವಾಗಿ ಪ್ರತಿಪಾದಿಸುತ್ತಾ ಬಂದಿರುವ ಹರ್ಷಕುಮಾರ್‌ ಕುಗ್ವೆ ಹೇಳುತ್ತಾರೆ.

ನಾಗೇಗೌವ್ಡ ಕೀಲಾರ ಶಿವಲಿಂಗಯ್ಯ, ಹರ್ಷಕುಮಾರ್‌ ಕುಗ್ವೆ, ಜಹೋಮ ತಿಪ್ಪೇಸ್ವಾಮಿ, ಕುಮಾರ್‌ ಬುಡಿಕಟ್ಟಿ ಮೊದಲಾದವರು ಎಲ್ಲರ ಕನ್ನಡದ ಪರವಾಗಿ ಸರಣಿ ಪೋಸ್ಟ್‌ಗಳನ್ನು ಹಾಕುತ್ತಿದ್ದರೆ, ಎಲ್ಲರ ಕನ್ನಡದ ವಿರುದ್ಧ ತಕರಾರು ಎತ್ತಿದವರೂ ಬಹಳಷ್ಟು ಮಂದಿಯಿದ್ದಾರೆ. ಸನತ್‌ ಕುಮಾರ್‌ ಬೆಳಗಲಿ, ಬಶೀರ್‌ ಬಿಎಂ, ಶಶಿಧರ್‌ ಹೆಮ್ಮಾಡಿಯವರಂತಹ ಪತ್ರಕರ್ತರು ಎಲ್ಲರ ಕನ್ನಡದ ಮಿತಿಗಳನ್ನು ಉಲ್ಲೇಖಿಸಿ ವಿರೋಧಿಸಿದ್ದಾರೆ.

“ಸರಳ ಕನ್ನಡದಲ್ಲಿ ಬರೆಯುವ ಈ ಹೊಸ ಪ್ರಯತ್ನವೇ ಕನ್ನಡವನ್ನು ಇನ್ನಷ್ಟು ಗೊಂದಲಕ್ಕೀಡು ಮಾಡಿ ಜಟಿಲ ಗೊಳಿಸಬಹುದು. ಹಲವರನ್ನು ಗೊಂದಲಕ್ಕೆ ತಳ್ಳಬಹುದು. ಸಂದರ್ಶನದಲ್ಲಿ ಕನ್ನಡ ಬಳಕೆಯ ಸಂದರ್ಭದಲ್ಲಿ ಸಮಸ್ಯೆ ಎದುರಿಸಿ ಕೆಲಸ ಕಳೆದು ಕೊಳ್ಳಬಹುದು. ಯಾವುದೇ ಭಾಷೆಯ ಲಿಪಿ ಕಾಲಕ್ಕೆ ತಕ್ಕಂತೆ ಬದುಕಿಗೆ ಪೂರಕವಾಗಿ ಅದಾಗಿಯೇ ಬದಲಾವಣೆಯಾಗುತ್ತಾ ಹೋಗುತ್ತದೆ. ಮನುಷ್ಯನ ಹಸ್ತಕ್ಷೇಪ ಅದನ್ನು ಇನ್ನಷ್ಟು ಗೊಂದಲಕ್ಕೆ ತಳ್ಳಬಹುದು.  ಲಿಪಿ ಬದಲಾವಣೆಯ ಈ ಪ್ರಯತ್ನ ಕನ್ನಡ ಕಲಿಯುವವರನ್ನು ಇನ್ನಷ್ಟು ಗೊಂದಲಕ್ಕೆ ತಳ್ಳಿ ಮೂಲೆಗುಂಪು ಮಾಡುತ್ತವೆ ಮತ್ತು, ಕನ್ನಡದ ಸ್ಥಾನದಲ್ಲಿ ಬೇರೆ ಭಾಷೆಗಳು ಪ್ರಾಬಲ್ಯವನ್ನು ಸಾಧಿಸುತ್ತವೆ” ಎಂಬ ಆತಂಕವನ್ನು ಬಶೀರ್‌ ಬಿಎಂ ವ್ಯಕ್ತಪಡಿಸಿದ್ದಾರೆ.

ಮಂಡ್ಯ ,ಮೈಸೂರು ಕಡೆ ಆಡು ಮಾತಿನಲ್ಲಿ ಮಹಾಪ್ರಾಣ ಬಳಕೆಯಿಲ್ಲ. ಇರಬೇಕೆಂದಿಲ್ಲ. ಆದರೆ ಉತ್ತರ ಕರ್ನಾಟಕದ ಬಹುತೇಕ ಕಡೆ ಮಹಾಪ್ರಾಣ ಬಳಕೆಯಲ್ಲಿದೆ‌. ಜನರಾಡುವ ಭಾಷೆಯನ್ನು ಪಂಡಿತರು ದುರಸ್ತಿ ಮಾಡುವ ದುಸ್ಸಾಹಸ ಬೇಡ. ಭಾಷೆಯೊಂದು ಜನರಿಂದ ಬೆಳೆಯುತ್ತದೆ ಪಂಡಿತರಿಂದಲ್ಲ .ಸಂಸ್ಕೃತ ,ಇಂಗ್ಲೀಷ್ ,ಉರ್ದು,ಹಿಂದಿ,ಮರಾಠಿ ಶಬ್ದಗಳಿದ್ದ ಮಾತ್ರಕ್ಕೆ ಅದು ಅಶುದ್ಧ ಎಂದು ಹೇಳುವದು ಶ್ರೇಷ್ಠತೆಯ ವ್ಯಸನ ಎಂದು ನಾನು ಲೇವಡಿ ಮಾಡುವುದಿಲ್ಲ.ನಮ್ಮ ವಾದವನ್ನು ಮಂಡಿಸಬಹುದು.ಆದರೆ ಅದನ್ನು ಒಪ್ಪಲೇಬೇಕೆಂಬ ಮನೋಭಾವ ಸರಿಯಲ್ಲ‌.ಇದಕ್ಕೂ ಒಂದೇ ಭಾಷೆ,ಒಂದೇ ಧರ್ಮ, ಒಂದೇ ಸಂಸ್ಕೃತಿ ಎಂಬ ವಾದ ಮಾಡುವವರಿಗೂ ವ್ಯತ್ಯಾಸವಿಲ್ಲ. ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಮಲೆನಾಡು,ಹೀಗೆ ಹಲವಾರು ಆಸ್ಮಿತೆಗಳ ಮೇಲೆ ಏಕತ್ವದ ಆಕ್ರಮಣ  ಸರಿಯಲ್ಲ ಎಂದು ಹಿರಿಯ ಪತ್ರಕರ್ತ ಸನತ್‌ ಕುಮಾರ್‌ ಬೆಳಗಲಿ ಅಭಿಪ್ರಾಯಪಟ್ಟಿದ್ದಾರೆ.

'ಒಂದು ದೇಶ: ಒಂದು ಸಂಸ್ಕೃತಿ' ಎಂಬುದು ಎಷ್ಟು ಅರ್ಥಹೀನ ಮತ್ತು ಅಪಾಯಕಾರಿ ಹೇರಿಕೆಯೊ,  ಹಾಗೇ ಯಾವುದೊ ಒಂದು ಶೈಲಿಯ ಕನ್ನಡವನ್ನು 'ಎಲ್ಲರ ಕನ್ನಡ' ಅನ್ನೋದು ಕೂಡ ಆಭಾಸಕಾರಿ ಕಸರತ್ತು. ಇಂಡಿಯಾದಲ್ಲಿರುವ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯ ನಮ್ಮ ಕರ್ನಾಟಕವೊಂದರಲ್ಲೇ ಇದೆ. ಕನ್ನಡದಲ್ಲೇ ಇರುವ ವೈವಿಧ್ಯ ಎಷ್ಟು ಚೆನ್ನ! ಇಂಥ ವೈವಿಧ್ಯವೇ ನಮ್ಮ ವೈಶಿಷ್ಟ್ಯ ಮತ್ತು ಹೆಮ್ಮೆ ಕೂಡ.  ಭಾಷೆ/ಆಡುನುಡಿ ನಮ್ಮ ಪ್ರಜ್ಞೆಯ ಮತ್ತು ಭಾವಕೋಶದ ಅವಿಭಾಜ್ಯ ಭಾಗ. ಇಲ್ಲಿ ಯಾವುದೇ ಬದಲಾವಣೆ ಕಾಲಾನುಕ್ರಮದಲ್ಲಿ, ಸಹಜವಾಗಿ ಆಗುವಂಥದ್ದೇ ಹೊರತು ಹಳೆ ಬಟ್ಟೆ ಕಳಚಿ, ಹೊಸತು ತೊಟ್ಟುಬಿಡುವಷ್ಟು ಸರಾಗವಾದದ್ದಲ್ಲ. ಲಿಪಿ ಬದಲಾವಣೆ ಅಥವಾ ಆಡುನುಡಿಯ ಬದಲಾವಣೆಯನ್ನು ನಾವು ಫೇಸ್ಬುಕ್ನಲ್ಲಿ ಕೂತು ಮಾಡಿಬಿಡ್ತೀವಿ ಅಂದ್ಕೊಳೋದು ಒಂಥರ ತಮಾಷೆಯಾಗಿ ಕಾಣುತ್ತೆ! ಸ್ನೇಹಿತರ ಆಶಯದಲ್ಲಿ ಕೆಲವು ಧನಾತ್ಮಕ ಅಂಶಗಳಿವೆಯಾದರೂ ಇಂಥ ಬದಲಾವಣೆಗಳು ದಿಡೀರಂತ ಆಗುವಂಥದ್ದಲ್ಲ ಎಂದು ಚರಿತಾ ಮೈಸೂರು ಬರೆದಿದ್ದಾರೆ.

ಎಲ್ಲರ ಕನ್ನಡದ ವಿರುದ್ಧ ಪರ-ವಿರೋಧ ಚರ್ಚೆಗಳು ತೀವ್ರವಾಗಿ ನಡೆಯುತ್ತಿರುವುದರ ನಡುವೆಯೇ, ಬದಲಾವಣೆ ಆದರೆ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದವರೂ ಇದ್ದಾರೆ. 'ಎಲ್ಲರ ಕನ್ನಡ' ಆಂದೋಲನಕ್ಕೆ ಒಬ್ಬ ಅಪ್ಪಟ ಕನ್ನಡಿಗನಾಗಿ ನನ್ನ ಬೆಂಬಲ ಇದೆ. ಹಾಗಾದರೆ 'ಎಲ್ಲರ ಕನ್ನಡ'ದ ವರ್ಣಮಾಲೆ, ಕಾಗುಣಿತ ಮತ್ತು ವ್ಯಾಕರಣವನ್ನು ತಿಳಿಸಿ. ಯಾವುದು ಕನ್ನಡ, ಯಾವುದು ಕನ್ನಡೇತರ ಅನ್ನುವುದು ಆಧಾರ ಸಮೇತ ತಿಳಿಯದ ಹೊರತು 'ಎಲ್ಲರ ಕನ್ನಡ' ಯಾವುದೆಂದು ತಿಳಿಯುವುದು ಕಷ್ಟ. ಹಾಗೆಯೆ ಬಳಸುವುದೂ ಕಷ್ಟ ಎಂದು ಕವಿ ಹೃದಯಶಿವ ಬರೆದಿದ್ದಾರೆ.

ಬಹುತೇಕರು ಎಲ್ಲರ ಕನ್ನಡ ಎಂಬುದು ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ಪ್ರಾರಂಭವಾದ ಹೊಸ ಅಭಿಯಾನವೆಂದು ಭಾವಿಸಿಕೊಂಡಿದ್ದಾರೆ. ಆದರೆ, ಎಲ್ಲರ ಕನ್ನಡ ಎಂಬ ವಿಚಾರ ಈಗ ಹೊಸದಾಗಿ ಪ್ರಾರಂಭವಾದದ್ದೇನು ಅಲ್ಲ. ದಶಕದ ಹಿಂದೆಯೇ ಹೊಸಗನ್ನಡ ನುಡಿಯರಿಮೆಗೆ ಹೊಸ ತಿರುವು ಕೊಡಲು  ಡಿ.ಎನ್. ಶಂಕರ ಭಟ್  (ಬಟ್ ) ಶ್ರಮಿಸಿದ್ದಾರೆ. ಮಹಾಪ್ರಾಣಗಳಿಲ್ಲದ ಪದಗಳನ್ನು ಬಳಸಿ ಅವರು ಪುಸ್ತಕಗಳನ್ನು ರಚಿಸಿದ್ದಾರೆ. ಹೊನಲು ವೆಬ್‌ಸೈಟಿನ ಲೇಖನದ ಪ್ರಕಾರ ಹೊಸಗನ್ನಡ ನುಡಿಯರಿಮೆಗೆ ಶಂಕರಬಟ್  ಮೊದಲಿಗರು ಅಲ್ಲವಾದರೂ, ಅದರ ಗತಿಯನ್ನು ಹೆಚ್ಚು ತೀವ್ರಗೊಳಿಸಿದವರಲ್ಲಿ ಇವರು ಮೊದಲಿಗರು. ʼಎಲ್ಲರ ಕನ್ನಡʼ ಎಂಬ ಪದಬಳಕೆಯೂ ಸರಿಸುಮಾರು ಹತ್ತಾರು ವರ್ಷಗಳ ಹಿಂದೆಯೇ ಚಾಲ್ತಿಗೆ ಬಂದಂತಿದೆ. ಹೊನಲು ವೆಬ್‌ಸೈಟ್‌ ಈ ಕುರಿತಾದ ಹಲವು ಲೇಖನಗಳನ್ನು ಈ ಹಿಂದೆಯೇ ಪ್ರಕಟಿಸಿದೆ. ಇನ್ನು ಶಂಕರಬಟ್‌ ಅವರ ವಿಚಾರ ಮತ್ತು ನುಡಿಯರಿಗೆಯ ಬಗ್ಗೆ http://dnshankarabhat.net/ ಲಿಂಕ್‌ ಮೂಲಕ ತಿಳಿದುಕೊಳ್ಳಬಹದು.

ಒಟ್ಟಾರೆ, ಎಲ್ಲರ ಕನ್ನಡ ಎನ್ನುವುದು ಹೊಸ ಚರ್ಚೆಯನ್ನೇ ಸೃಷ್ಟಿಸಿದ್ದು, ಇದು ಯಾವ ದಿಕ್ಕಿಗೆ ತಿರುಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top