ಕೊಳ್ಳೇಗಾಲ: ಖಾಸಗಿ ಶಾಲೆಯ 13 ವಿದ್ಯಾರ್ಥಿಗಳಿಗೆ ಕೋವಿಡ್, 3 ದಿನ ಶಾಲೆ ಬಂದ್
ಚಾಮರಾಜನಗರ, ಜ.19: ಜಿಲ್ಲೆಯ ಕೊಳ್ಳೇಗಾಲ ಹೊರವಲಯದ ಮುಡಿಗುಂಡ ಬಳಿ ಇರುವ ಖಾಸಗಿ ಶಾಲೆಯೊಂದರ 13 ಮಕ್ಕಳಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಶಾಲೆಗೆ 3 ದಿನಗಳ ಕಾಲ ರಜೆ ಸಾರಲಾಗಿದೆ.
ಹೊರ ವಲಯ ಮುಡಿಗುಂಡ ಬಳಿ ಇರುವ ಆದರ್ಶ ವಿದ್ಯಾಲಯದ 13 ವಿದ್ಯಾರ್ಥಿಗಳು ಕೋವಿಡ್ ಸೋಂಕಿಗೆ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ ಎಂದು ಕೊಳ್ಳೇಗಾಲ ಬಿಇಒ ಚಂದ್ರ ಪಾಟೀಲ್ ತಿಳಿಸಿದ್ದಾರೆ.
ಮುಡಿಗುಂಡ ಗ್ರಾಮದ ಆದರ್ಶ ವಿದ್ಯಾಲಯದ ಓರ್ವ ವಿದ್ಯಾರ್ಥಿಯಲ್ಲಿ ನಿನ್ನೆ ಕೊರೋನ ಸೋಂಕು ಕಾಣಿಸಿಕೊಂಡಿತ್ತು.
ಈ ಹಿನ್ನಲೆಯ ಎಲ್ಲಾ ಮಕ್ಕಳಿಗೂ ಕೋವಿಡ್ ತಪಾಸಣಾ ಮಾಡಿಸಲಾಗಿತ್ತು. ಈ ಫಲಿತಾಂಶದ ಬಳಿಕ 13 ಮಕ್ಕಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಬಿಇಒ ಸ್ಪಷ್ಟಪಡಿಸಿದ್ದಾರೆ.
ಸದ್ಯ ಶಾಲೆಗೆ 3 ದಿನಗಳ ಕಾಲ ಆದರ್ಶ ವಿದ್ಯಾಲಯಕ್ಕೆ ರಜೆ ಸಾರಲಾಗಿದೆ. ಶಾಲೆಯನ್ನು ಸಂಪೂರ್ಣ ಸಾನಿಟೈಸ್ ಮಾಡುವಂತೆ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ ಎಂದು ಬಿಇಒ ಚಂದ್ರ ಪಾಟೀಲ್ ತಿಳಿಸಿದ್ದಾರೆ.
Next Story