ಜಿ.ಮಾದೇಗೌಡ ಕುರಿತ ಆಡಿಯೋ ವೈರಲ್: ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಆಕ್ರೋಶ
''ಮಂಡ್ಯ ಲೋಕಸಭಾ ಉಪಚುನಾವಣೆಗೆ 30 ಕೋಟಿ ರೂ. ಖರ್ಚು ಮಾಡಿದ್ದೆ''

ಶಿವರಾಮೇಗೌಡ
ಮಂಡ್ಯ, ಜ.30: ಮಾಜಿ ಸಂಸದ ದಿವಂಗತ ಜಿ.ಮಾದೇಗೌಡ ಅವರಿಗೆ ‘ಹೊಡೆದಿದ್ದೆ’ ಎಂದು ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಅವರದ್ದೆನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಿವರಾಮೇಗೌಡ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಿಲ್ಲುತ್ತಿದ್ದು, ತನಗೆ ಬೆಂಬಲ ನೀಡಬೇಕು ಎಂದು ಜೆಡಿಎಸ್ ಕಾರ್ಯಕರ್ತೆಯೊಬ್ಬರ ಜತೆ ದೂರವಾಣಿಯಲ್ಲಿ ಮಾತನಾಡುವಾಗ ಶಿವರಾಮೇಗೌಡ ಮಾದೇಗೌಡರ ಬಗ್ಗೆ ಲಘುವಾಗಿ ಮಾತನಾಡಿರುವುದು ಆಡಿಯೋದಲ್ಲಿದೆ.
''ತಾನು ಕಾಂಗ್ರೆಸ್ನಿಂದ ಐದು ಬಾರಿ ಚುನಾವಣೆಗೆ ನಿಂತು ಸೋತೆ. ನನ್ನ ಸೋಲಿಗೆ ಆಗ ಸಂಸದರಾಗಿದ್ದ ಜಿ.ಮಾದೇಗೌಡ ಕಾರಣ. ಆತ ಆಗಲೇ ಸಾಯಬೇಕಿತ್ತು, ಈಗ ಸತ್ತಿದ್ದಾನೆ. ಅವನಿಗೆ ಶ್ರವಣಬೆಳಗೊಳದಲ್ಲಿ ಹೊಡೆದಿದ್ದೆವು'' ಎಂದು ಮಾತನಾಡುವಾಗ ಶಿವರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಶಾಸಕ ಸುರೇಶ್ಗೌಡರ ಕಾರ್ಯವೈಖರಿಯನ್ನು ಟೀಕಿಸಿರುವ ಶಿವರಾಮೇಗೌಡ, ಆತ ಶಂಕುಸ್ಥಾಪನೆ, ಗುದ್ದಲಿಪೂಜೆ ಬಿಟ್ಟರೆ ಬೇರೆ ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಬೇರೊಬ್ಬರು ಶಾಸಕರಾಗಿದ್ದರೆ ಅವನ ತಾತನಂತಹ ಕೆಲಸ ಮಾಡುತ್ತಿದ್ದರು ಎಂದು ಲೇವಡಿ ಮಾಡಿದ್ದಾರೆ.
''ಉಪಚುನಾವಣೆಯಲ್ಲಿ 30 ಕೋಟಿ ರೂ. ಖರ್ಚುಮಾಡಿ ಗೆದ್ದು 5 ತಿಂಗಳು ಸಂಸದನಾಗಿದ್ದೆ, ಮತ್ತೆ ಟಿಕೆಟ್ ಕೊಟ್ಟಿದ್ದರೆ ಗೆಲ್ಲುತ್ತಿದ್ದೆ. ಅದನ್ನು ತಪ್ಪಿಸಿ ನಿಖಿಲ್ಕುಮಾರ ಸ್ವಾಮಿಗೆ ಸುರೇಶ್ಗೌಡ ಟಿಕೆಟ್ ಕೊಡಿಸಿದ. ನನ್ನದು 8 ಶಾಲೆಗಳಿದ್ದು, 450 ಶಿಕ್ಷಕರಿದ್ದಾರೆ. ಪ್ರತಿ ತಿಂಗಳು 3 ಕೋಟಿ ರೂ. ಸಂಬಳ ನೀಡುತ್ತಿದ್ದೇನೆ'' ಎಂದೂ ಅವರು ಹೇಳಿದ್ದಾರೆ.
ಏನೇ ಆಗಲಿ ಈ ಬಾರಿ ನಾಗಮಂಗಲದಿಂದ ಚುನಾವಣೆಗೆ ನಿಂತೇ ನಿಲ್ಲುತ್ತೇನೆ. ಎಂಎಲ್ಎ ಟಿಕೆಟ್ ತೆಗೆದುಕೊಂಡು ನಾಗಮಂಗಲಕ್ಕೆ ಪಾದ್ರಿ ಆಗಬೇಕು ಅಂತ ನಿರ್ಧಾರ ಮಾಡಿಬಿಟ್ಟಿದ್ದೀನಿ, ದಯವಿಟ್ಟು ಬೆಂಬಲ ನೀಡಬೇಕು ಎಂದು ಶಿವರಾಮೇಗೌಡ ಕಾರ್ಯಕರ್ತೆಯಲ್ಲಿ ಮನವಿ ಮಾಡಿದ್ದಾರೆ.
ಕೆ.ಎಂ.ದೊಡ್ಡಿಯಲ್ಲಿ ಸೋಮವಾರ ಪ್ರತಿಭಟನೆ:
ಎಲ್.ಆರ್.ಶಿವರಾಮೇಗೌಡರ ಹೇಳಿಕೆ ಖಂಡಿಸಿ ನಾಳೆ(ಜ.31) ಮದ್ದೂರು ತಾಲೂಕು ಕೆ.ಎಂ.ದೊಡ್ಡಿ ಭಾರತಿ ಕಾಲೇಜು ಎದುರು ಮಾದೇಗೌಡರ ಅಭಿಮಾನಿಗಳು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಮಾದೇಗೌಡರ ಬಗ್ಗೆ ಮಾತನಾಡುವ ಯೋಗ್ಯತೆ ಶಿವರಾಮೇಗೌಡರಿಗೆ ಇಲ್ಲ. ಅವರೊಬ್ಬ ‘ಕೊಲೆಗೆಡುಕ’, ರಾಜಕಾರಣಿ. ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಾದೇಗೌಡರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಅಭಿಮಾನಿಗಳು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜಿಪಂ ಮಾಜಿ ಸದಸ್ಯ ರಾಜೀವ್ ಮನವಿ ಮಾಡಿದ್ದಾರೆ.
ಮಧು ಮಾದೇಗೌಡ ಆಕ್ರೋಶ:
ತನ್ನ ತಂದೆ ಬಗ್ಗೆ ಲಘುವಾಗಿ ಮಾತನಾಡಿರುವ ಶಿವರಾಮೇಗೌಡರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಧಾನಪರಿಷತ್ ಮಾಜಿ ಸದಸ್ಯ ಮಧು ಮಾದೇಗೌಡ, ‘ಶಿವರಾಮೇಗೌಡ ಸರ್ಕಸ್ನಲ್ಲಿನ ಜೋಕರ್ ಇದ್ದಹಾಗೆ. ಮಂಡ್ಯ ಭಾಗದಲ್ಲಿ ಆತನನ್ನು 420 ಶಿವರಾಮೇಗೌಡ ಅಂತಾ ಕರೆಯುತ್ತಾರೆ. ಶಿವರಾಮೇಗೌಡನಿಗೆ ಯಾವ ರೀತಿ ಬುದ್ದಿ ಹೇಳಬೇಕೋ ಆ ರೀತಿಯೇ ನಾವು ಬುದ್ದಿ ಹೇಳುತ್ತೇವೆ. ಅವರು ನಮ್ಮ ತಂದೆಯ ಕಾಲು ಹಿಡಿಯೋದನ್ನು ನಾನು ನೋಡಿದ್ದೇನೆ’ ಎಂದಿದ್ದಾರೆ.
‘ನಮ್ಮ ತಂದೆ ಎದರುಗಡೆ ನಿಂತು ಮಾತಾಡುವ ಶಕ್ತಿಯೂ ಶಿವರಾಮೇಗೌಡನಿಗೆ ಇರಲಿಲ್ಲ. 60 ಕೋಟಿ ರೂ. ಖರ್ಚು ಮಾಡಿದರೂ ಶಿವರಾಮೇಗೌಡ ಚುನಾವಣೆಯಲ್ಲಿ ಗೆಲ್ಲಲ್ಲ. 420 ಕೆಲಸ ಮಾಡುವ ಕಾರಣ ಜನ ಹೊಡೆಯುತ್ತಾರೆಂದು ಎಸ್ಕಾರ್ಟ್ ಹಾಕಿಕೊಂಡು ತಿರುಗಾಡುತ್ತಾನೆ. ಅವನಿಗೆ ಬುದ್ದಿ ಕಲಿಸುವುದು ನಮಗೆ ಗೊತ್ತಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಶಿವರಾಮೇಗೌಡರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಜಿಲ್ಲಾ ವಕ್ತಾರ ಸಿ.ಎಂ.ದ್ಯಾವಪ್ಪ, ಶಿವರಾಮೇಗೌಡ ಕ್ಷಮೆಯಾಚಿಸದಿದ್ದರೆ, ಅವರಿಗೆ ಘೇರಾವ್ ಮಾಡುವುದಾಗಿ ಎಚ್ಚರಿಸಿದ್ದಾರೆ.







